ಮಗನಿಗೆ ಸಣ್ಣ ವಯಸ್ಸಿನಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಅವರ ಇಡೀ ಕುಟುಂಬವನ್ನೇ ಕಂಟಕದಲ್ಲಿ ಸಿಲುಕುವಂತೆ ಮಾಡಿತ್ತು.... ಇದು ಭಾರತದ ಫೇಮಸ್ ಹಾಸ್ಯನಟನ ನೋವಿನ ಕಥೆ...

Actor Johnny Lever: ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಇಡೀ ಜಗತ್ತನ್ನೇ ನಗಿಸಿದ ನಟ ಜಾನಿಲಿವರ್. ಹಲವು ಭಾರತೀಯ ಭಾಷೆಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ಜಾನಿಲಿವರ್ ಫೇಮಸ್ ಹಾಸ್ಯನಟ. ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ಈ ನಟನ ಜೀವನದಲ್ಲಿ ಬಿರುಗಾಳಿಯೇ ಬೀಸಿತ್ತು. ಮಗನಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಂಡಿದ್ದ ಮಾರಕ ಕ್ಯಾನ್ಸರ್ ಕಾಯಿಲೆ ಇವರ ಜೀವನವನ್ನ್ ಮುಳ್ಳಿನ ಹಾದಿಗೆ ತಂದು ದೂಡಿತ್ತು.
ಎಲ್ಲರನ್ನೂ ನಗಿಸುವವರ ಜೀವನದಲ್ಲಿ ನಗಲಾರದಷ್ಟು ನೋವಿರುತ್ತೆ ಅಂತಾರೆ.... ಈ ಸಾಲುಗಳು ಜಾನಿಲಿವರ್ ಅವರ ಬದುಕಿನಲ್ಲಿ ಅಕ್ಷರಶಃ ಸತ್ಯವಾಗಿತ್ತು. ಜಾನಿ ಅವರ ಪ್ರೀತಿಯ ಮಗ ಜೆಸ್ಸಿಗೆ 10 ವರ್ಷ ಇದ್ದಾಗಲೇ ಅವನ ದೇಹದಲ್ಲಿ ತೀವ್ರವಾದ ಕ್ಯಾನ್ಸರ್ ಗೆಡ್ಡೆ ಇರುವುದು ಪತ್ತೆಯಾಗಿತ್ತು. ಈ ವಿಷಯ ಇಡೀ ಕುಟುಂಬವನ್ನೇ ಕಂಗಾಲಾಗಿಸಿತ್ತು. ಚಿಕಿತ್ಸೆಗಾಗಿ ಭಾರತದೆಲ್ಲೆಡೆ ತಿರುಗಾಡಿದ ಜಾನಿಲಿವರ್ಗೆ ಎಲ್ಲಿಯೂ ಚಿಕಿತ್ಸೆ ಸಿಗಲಿಲ್ಲ. ಆ ಸಮಯದಲ್ಲಿ ಮಗ ಜೆಸ್ಸಿಯ ಜೀವನದಲ್ಲಿ ಆಶಾಕಿರಣದಂತೆ ಬಂದ್ದಿದ್ದು ಯುನೈಟೆಡ್ ಸ್ಟೇಟ್ಸ್ನ ಒಂದು ಆಸ್ಪತ್ರೆ.
ಮಗನ ಕಾಯಿಲೆಗೆ ಪರಿಹಾರ ಕಾಣದೆ ಹತಾಶೆಯಲ್ಲಿದ್ದ ಕುಟುಂಬ ಒಂದು ದಿನ ಪಾದ್ರಿಯೊಬ್ಬರನ್ನು ಭೇಟಿಯಾದರು. ಅವರ ಸಲಹೆಯಂತೆ ಪ್ರಮುಖ ಕ್ಯಾನ್ಸರ್ ಆರೈಕೆ ಕೇಂದ್ರವಾದ ಸ್ಲೋನ್ ಕೆಟ್ಟರಿಂಗ್ ಆಸ್ಪತ್ರೆಗೆ ಭೇಟಿ ನೀಡುವಂತೆ ಒತ್ತಾಯಿಸಿದರು. ಒಂದೆಡೆ ಜಾನಿ ಯುಎಸ್ನಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಲು ಸಮಾಲೋಚನೆ ಮುಂದುವರಿಯಲು ನಿರ್ಧರಿಸಿದರು. ಆದರೆ, ಜಾನಿ ಅವರ ಪತ್ನಿ ಜೆಸ್ಸಿಯ ತಾಯಿ ಆತಂಕ ಮತ್ತು ಹಿಂಜರಿಕೆಯಿಂದ ತುಂಬಿದ್ದರು.
ಮಗನಿಗಾಗಿ ಜಾನಿ ಲಿವರ್ ದಿಟ್ಟ ನಿರ್ಧಾರ:
ಹೇಗಾದರೂ ಮಾಡಿ ಮಗನನ್ನು ಸಾವಿನ ದವಡೆಯಿಂದ ಪಾರು ಮಾಡಬೇಕು ಎಂದು ದಿಟ್ಟ ನಿರ್ಧಾರ ಕೈಗೊಂಡ ಜಾನಿಲಿವರ್, ವಿದೇಶಿ ನೆಲದಲ್ಲಿ ಮಗನ ಶಸ್ತ್ರಚಿಕಿತ್ಸೆಗಾಗಿ ಪಣತೊಟ್ಟರು. ಮೊದಲಿಗೆ ದೇವರ ಪವಾಡಗಳ ಮೇಲೆ ಅಷ್ಟಾಗಿ ನಂಬಿಕೆ ಹೊಂದಿರದ ಇವರು ಈ ಸಮಯದಲ್ಲಿ ಮಗನ ಪ್ರಾಣ ಉಳಿಸಿಕೊಳ್ಳಲು ಸಂಪೂರ್ಣವಾಗಿ ಆಧ್ಯಾತ್ಮದ ಮೊರೆ ಹೋಗಿದ್ದರಂತೆ. ಅವರು ಪ್ರಾರ್ಥನೆಯಲ್ಲಿ ಎಷ್ಟು ಆಳವಾಗಿ ಮಗ್ನರಾಗಿದ್ದರೆಂದರೆ ಅವರ ಹೆಂಡತಿ ತನ್ನ ಗಂಡ ವಾಸ್ತವದೊಂದಿಗೆ ಸಂಪರ್ಕವನ್ನು ಕಳೆದುಕೊಂಡದ್ದಾರೆಂದು ಭಾವಿಸಿದ್ದೂ ಉಂಟು...
ಮಗ ಜೆಸ್ಸಿ ಆಪರೇಷನ್ ಪೂರ್ಣಗೊಂಡರೂ ಜಾನಿ ಇನ್ನು ಪ್ರಾರ್ಥನೆಯಲ್ಲಿಯೇ ಮುಳುಗಿ ಹೋಗಿದ್ದರು. ಅವರಿಗೆ ತಾನು ಸ್ವತಃ ಆಪರೇಟಿಂಗ್ ಥಿಯೇಟರ್ನಲ್ಲಿದ್ದೇನೆ ಎಂಬಂತೆ ಭಾಸವಾಗಿತ್ತಂತೆ... ಆದರೆ, ಜಾನಿಯ ಈ ವರ್ತನೆಯನ್ನು ನೋಡಿ ಅವರ ಹೆಂಡತಿ ಆತನಿಗೆ ಹುಚ್ಚು ಹಿಡಿದಿದೆ ಎಂದು ಭಾವಿಸಿದ್ದರು. ಕೆಲವು ಸಮಯಗಳ ನಂತರ ಮಗ ಜೆಸ್ಸಿ ತನ್ನ ಎಡಗೈಯನ್ನು ಮೇಲಕ್ಕೆತ್ತಿ ತಾನು ಸರಿಯಾಗಿದ್ದೇನೆ ಎಂದು ಜಾನಿ ಮತ್ತು ಅವರ ಹೆಂಡತಿಗೆ ಸೂಚಿಸಿದನು. ಇದನ್ನು ಹತ್ತಿರದಿಂದ ಗಮನಿಸಿದ ದಂಪತಿಗಳಿಗೆ ಹೋದ ಪ್ರಾಣ ಮರಳಿ ಬಂದಂತಾಗಿತ್ತು ಎಂದು ಜಾನಿಲಿವರ್ ತಮ್ಮ ಕಣ್ಣೀರಿನ ದಿನಗಳನ್ನು ನೆನೆದಿದ್ದಾರೆ.
ಅಪಾಯಕಾರಿ ಕ್ಯಾನ್ಸರ್ನಿಂದ ಹೋರಾಡಿ ಬಂದ ಜಾನಿ ಲಿವರ್ರವರ ಮಗ ಜೆಸ್ಸಿ ಪ್ರಸ್ತುತ ಸಂಗೀತಗಾರ. ಆಗಾಗ್ಗೆ ತಾನು ಹಾಡು ಹಾಡುವ ಮತ್ತು ಡ್ರಮ್ಸ್ ನುಡಿಸುವ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಜೆಸ್ಸಿ ಸಂಗೀತ ಮತ್ತು ಡಿಜಿಟಲ್ ಮಾಧ್ಯಮವನ್ನು ಅನ್ವೇಷಿಸುತ್ತಿದ್ದರೆ, ಅವರ ಸಹೋದರಿ ಜೇಮೀ ಲಿವರ್ ತಮ್ಮ ತಂದೆಯ ಹಾಸ್ಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ, ಪ್ರಪಂಚದಾದ್ಯಂತ ಸ್ಟ್ಯಾಂಡ್-ಅಪ್ ಹಾಸ್ಯವನ್ನು ಪ್ರದರ್ಶಿಸುತ್ತಿದ್ದಾರೆ.