)
actress penalty: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಈ ಬಾರಿ ನಡೆದ ಓಣಂ ಹಬ್ಬದ ಸಂಭ್ರಮದಲ್ಲಿ ಹಲವು ಭಾರತೀಯರು ಪಾಲ್ಗೊಂಡಿದ್ದರು. ಆದರೆ ಈ ಸಂಭ್ರಮದ ನಡುವೆ ಖ್ಯಾತ ಮಲಯಾಳಂ ನಟಿ ನವ್ಯಾ ನಾಯರ್ ಅವರಿಗೆ ಎದುರಾದ ಅನುಭವ ಮಾತ್ರ ಸಂಪೂರ್ಣ ವಿಭಿನ್ನವಾಗಿತ್ತು. ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಅವರು ತಮ್ಮೊಂದಿಗೆ ಕೇವಲ ಕೆಲವು ಮಲ್ಲಿಗೆ ಹೂಗಳನ್ನು ತೆಗೆದುಕೊಂಡು ಹೋಗಿದ್ದರು ಅದೇ ಅವರಿಗೆ ಲಕ್ಷಾಂತರ ರೂಪಾಯಿ ದಂಡದ ಶಾಕ್ ತಂದಿತು.
ನವ್ಯಾ ನಾಯರ್ ತಮ್ಮೊಂದಿಗೆ ಸುಮಾರು 15 ಸೆಂ.ಮೀ ಅಳತೆಯ ಮಲ್ಲಿಗೆ ಹೂಗಳನ್ನು ಹೊತ್ತುಕೊಂಡು ಮೆಲ್ಬೋರ್ನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಿಮಾನ ನಿಲ್ದಾಣದ ಅಧಿಕಾರಿಗಳು ಅವರ ವಸ್ತುಗಳನ್ನು ಪರಿಶೀಲಿಸಿದಾಗ ಮಲ್ಲಿಗೆ ಹೂಗಳು ಪತ್ತೆಯಾಗಿದ್ದು, ತಕ್ಷಣವೇ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾಗಿತು. ಇದರ ಫಲಿತಾಂಶವಾಗಿ ಅವರಿಗೆ 1.25 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ನವ್ಯಾ ನಾಯರ್, “ನನ್ನ ತಂದೆ ಕೊಚ್ಚಿಯಲ್ಲಿ ಮಲ್ಲಿಗೆ ಹೂವನ್ನು ಖರೀದಿಸಿದ್ದರು. ಅದನ್ನು ಎರಡು ಭಾಗಗಳಾಗಿ ಸೀಳಲಾಗಿತ್ತು. ಒಂದು ಭಾಗವನ್ನು ತಲೆಯಲ್ಲಿ ಮುಡಿದುಕೊಂಡಿದ್ದೆ, ಮತ್ತೊಂದು ಭಾಗವನ್ನು ನನ್ನ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದೆ. ಆದರೆ ಈ ಹೂವು ನನಗೆ ದೊಡ್ಡ ಸಮಸ್ಯೆಯನ್ನು ತಂದಿತು” ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ವಿದೇಶಗಳಿಂದ ತರುವ ಸಸ್ಯ, ಹೂ, ಹಣ್ಣು, ತರಕಾರಿ ಮುಂತಾದವುಗಳ ಮೇಲೆ ಕಠಿಣ ನಿಯಮಗಳಿವೆ. ಕೃಷಿ ಮತ್ತು ಪರಿಸರಕ್ಕೆ ಹಾನಿ ಉಂಟಾಗದಂತೆ ಮಾಡುವ ಉದ್ದೇಶದಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಇದೇ ನಿಯಮ ಉಲ್ಲಂಘನೆಯ ಕಾರಣಕ್ಕೆ ನವ್ಯಾ ನಾಯರ್ ಅವರಿಗೆ ದಂಡ ವಿಧಿಸಲಾಯಿತು. ಒಣ ಹೂವಲ್ಲ, ಹೊಸ ಮಲ್ಲಿಗೆ ಹೂಗಳನ್ನು ತೆಗೆದುಕೊಂಡಿರುವುದೇ ನಿಯಮ ಉಲ್ಲಂಘನೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬಳಿಕ ಓಣಂ ಸಂಭ್ರಮಕ್ಕೆ ಹೋದ ನವ್ಯಾ ನಾಯರ್ ಅವರಿಗೆ ನಿಜಕ್ಕೂ ಮರೆಯಲಾಗದ ಅನುಭವವಾಯಿತು ಎಂದು ಹೇಳಬಹುದು.