)
Darshan: ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ಅಂದರ್ ಆಗಿರುವ ದರ್ಶನ್ ವಿಚಾರಣೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ದೊರಕುತ್ತಿದ್ದ ರಾಜಾತಿಥ್ಯಕ್ಕೆ ಬ್ರೇಕ್ ಬಿದ್ದಿದೆ.
ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಈಗ ಜೈಲಿನಲ್ಲಿ ಕಷ್ಟ ಅನುಭವಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ. ಜೈಲಿನ ಸಾಮಾನ್ಯ ಊಟ ತಿನ್ನಲಾಗದೆ, ನಿದ್ರೆ ಬರದೆ, ಮಾನಸಿಕ ಒತ್ತಡದಲ್ಲಿ ಅವರು ತೀವ್ರವಾಗಿ ಪರದಾಡುತ್ತಿದ್ದಾರೆ ಎಂದು ವರದಿಯಾಗಿದ್ದು, ಇದರಿಂದ ಅವರ ತೂಕದಲ್ಲಿಯೂ ಇಳಿಕೆಯಾಗಿ, ಆರೋಗ್ಯ ಪರಿಸ್ಥಿತಿಯೂ ಹದಗೆಟ್ಟಿದೆ ಎಂದು ಮೂಲಗಳು ತಿಳಿಸಿದೆ.
ಜೈಲು ನಿಯಮಾವಳಿಯಂತೆ ದರ್ಶನ್ ಈಗ ಬ್ಯಾರಕ್ನೊಳಗಿನ ಕೊಠಡಿಯಿಂದ ಹೊರಬರುವಂತಿಲ್ಲ. ಇತರ ಕೈದಿಗಳ ಜೊತೆ ಸಮಯ ಕಳೆಯಬೇಕಾದ ಪರಿಸ್ಥಿತಿಯಲ್ಲಿ ಅವರು ಮಂಕಾಗಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ವಾರಕ್ಕೆ ಕೇವಲ ಎರಡು ಬಾರಿ ಮಾತ್ರ ಕುಟುಂಬಸ್ಥರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಹಿಂದಿನ ದಿನಗಳಲ್ಲಿ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ವಿಶೇಷ ರಾಜಾತಿಥ್ಯ ಸಿಕ್ಕಿದ್ದರಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅನೇಕ ಪ್ರಶ್ನೆಗಳು ಎದುರಾಗಿದ್ದವು. ಈಗ ಸುಪ್ರೀಂ ಕೋರ್ಟ್ನ ಸ್ಪಷ್ಟ ಆದೇಶದ ಪರಿಣಾಮವಾಗಿ ಯಾವುದೇ ರೀತಿಯ ಸೌಲಭ್ಯ ನೀಡಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ.
ಜೈಲಿನ ಮೂಲಗಳ ಪ್ರಕಾರ, ದರ್ಶನ್ ನ್ಯಾಯಾಲಯದ ಮುಂದೆ ಅಳಲನ್ನು ವ್ಯಕ್ತಪಡಿಸಿದ್ದು, ತಾನು ಅನುಭವಿಸುತ್ತಿರುವ ನೋವನ್ನು ತಾಳಲಾಗುತ್ತಿಲ್ಲವೆಂದು ಅತ್ತಿದ್ದಾರೆ. "ಪಾಯಿಸನ್ ಕೊಡಿಸಿ" ಎಂದು ನ್ಯಾಯಾಧೀಶರ ಬಳಿ ಬೇಡಿಕೊಂಡಿದ್ದಾರೆಂಬ ಮಾಹಿತಿಯೂ ಹೊರಬಿದ್ದಿದೆ.
ರಾಜಾತಿಥ್ಯಕ್ಕೆ ಅಂತಿಮವಾಗಿ ಕಾನೂನು ತಡೆ ಬಿದ್ದಿರುವುದರಿಂದ ದರ್ಶನ್ ಜೀವನದಲ್ಲಿ ತೀವ್ರ ತಿರುವು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಕುತೂಹಲ ಮೂಡಿಸಿದೆ.