)
Actress Jayaprada: ಜಯಪ್ರದಾ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಹಾಗೆಯೇ ಆಕೆಯ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ. ಅವರು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿದಂತೆ ಬಹುತೇಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ನಟಿಸಿರುವ ಹೀರೋಯಿನ್ ಎನ್ನುವುದು ಕೂಡ ಗೊತ್ತಿಲ್ಲದೇ ಇಲ್ಲ. ಆದರೆ ಮೊತ್ತ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸಿದಾಗ ಅವರ ವಯಸ್ಸೆಷ್ಟು ಗೊತ್ತಾ? ಕೇವಲ 14ನೇ ವರ್ಷ.
ಆ ಕಾಲದಲ್ಲಿ ಜಯಪ್ರದಾ 14ನೇ ವರ್ಷಕ್ಕೆ ನಾಯಕಿಯಾಗಿದ್ದಾರಾ ಎನ್ನುವ ಪ್ರಶ್ನೆ ಮೂಡಬಹುದು, ಕೆಲವರಿಗೆ ಆಶ್ಚರ್ಯವಾಗಲೂಬಹುದು. ಆದರೆ ಅದು ನಿಜ. ಅದೂ ಘಟಾನುಘಟಿ ನಾಯಕರೆದುರು. ಹಾಗೆಯೇ ಜಯಪ್ರದಾ ತಮ್ಮ ಚೊಚ್ಚಲ ಸಿನಿಮಾಕ್ಕೆ ಪಡೆದ ಸಂಭಾವನೆ ಕೇವಲ 10 ರೂಪಾಯಿ ಎನ್ನುವುದು ಕೂಡ ನಿಜವೇ.
ಜಯಪ್ರದಾ 1976ರಲ್ಲಿ ಭೂಮಿ ಕೋಸಮ್ ಸಿನಿಮಾ ಮೂಲಕ ಬಣ್ಣದ ಬದುಕನ್ನು ಶುರುಮಾಡಿದರು. ಭೂಮಿ ಕೋಸಮ್ ಸಿನಿಮಾದಲ್ಲಿ ಜಯಪ್ರದಾ ಕಾಣಿಸಿಕೊಳ್ಳುವುದು ಕೇವಲ 3 ನಿಮಿಷ. ಅಷ್ಟಕ್ಕೆ ಅವರು ಪಡೆದಿದ್ದ ಸಂಭಾವನೆ 10 ರೂಪಾಯಿ. ಆ ನಂತರ ಸರಿ ಸುಮಾರು 30 ವರ್ಷಗಳಿಂದ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಚಿತ್ರರಸಿಕರ ಮನ ತಣಿಸುತ್ತಿದ್ದಾರೆ.
14ನೇ ವಯಸ್ಸಿಗೆ ಬಣ್ಣ ಹಚ್ಚಿದ ಜಯಪ್ರದಾ ಬಲು ಬೇಗ ತಮ್ಮದೇಯಾದ ವಿಶೇಷ ಛಾಪು ಮೂಡಿಸಿಬಿಟ್ಟರು. ಒಂದಾದ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಾ ನಿರ್ಮಾಪಕರ ಪಾಲಿಗೆ ಹಾಟ್ ಕೇಕ್ ಆಗಿದ್ದರು. ಅವರ ಇನ್ನೊಂದು ವಿಶೇಷ ಎಂದರೆ ಅಭಿನಯಿಸಿದ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಸಕ್ಸಸ್ ಆದರು. ಜನರ ಮೆಚ್ಚುಗೆ ಗಳಿಸಿದರು.
ಜಯಪ್ರದಾ ಕನ್ನಡದಲ್ಲಿ ವರನಟ ಡಾ. ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್, ತೆಲುಗಿನಲ್ಲಿ ಎನ್.ಟಿ. ರಾಮರಾವ್, ನಾಗೇಶ್ ರಾವ್, ಕೃಷ್ಣ ರಾಜು, ಕೃಷ್ಣ, ಚಿರಂಜೀವಿ, ತಮಿಳಿನಲ್ಲಿ ರಜನಿಕಾಂತ್, ಕಮಲ ಹಸನ್, ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ಜಿತೇಂದ್ರ ಮತ್ತಿತರ ಮೇರುನಟರಿಗೆ ನಾಯಕಿಯಾಗಿ ಅಪಾರ ಮೆಚ್ಚುಗೆ ಗಳಿಸಿದ್ದರು.
ಎರಡು ದಶಕಗಳ ಪ್ಯಾನ್ ಇಂಡಿಯಾ ನಾಯಕಿಯಾಗಿ ಮಿರಿಮಿರಿ ಮಿಂಚಿದ ಜಯಪ್ರದಾ ಕ್ರಮೇಣ ರಾಜಕೀಯದತ್ತ ಹೊರಳಿದರು. ರಾಜ್ಯಸಭಾ ಸದಸ್ಯೆಯಾಗಿ ಕೆಲಸ ಮಾಡಿದರು. ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. ಚಿತ್ರರಂಗದಲ್ಲಿ ಇಲ್ಲದ ವಿವಾದಗಳು ರಾಜಕೀಯಕ್ಕೆ ಬಂದಾಗ ಅಪ್ಪಳಿಸಿದವು. ಇವರ ಇತ್ತೀಚಿನ ಥ್ರೋಬ್ಯಾಕ್ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.