)
Actor Dharmendra admitted to hospital: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ (89) ಅವರನ್ನ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಧರ್ಮೇಂದ್ರ ಅವರು ಅಸ್ವಸ್ಥರಾಗಿದ್ದರು. ಇಂದು (ನ.10) ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಧರ್ಮೇಂದ್ರ ಅವರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ಡಿಸೆಂಬರ್ 8ಕ್ಕೆ 90ನೇ ವಸಂತಕ್ಕೆ ಕಾಲಿಡಲಿರುವ ನಟ ಧರ್ಮೇಂದ್ರರನ್ನ ಕಳೆದ ವಾರವಷ್ಟೇ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಲ್ಲದೇ ಏಪ್ರಿಲ್ನಲ್ಲಿ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.
ಆರು ದಶಕಗಳ ವೃತ್ತಿಜೀವನದಲ್ಲಿ ಧರ್ಮೇಂದ್ರ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮದೇಯಾದ ವಿಶೇಷ ಛಾಪು ಮೂಡಿಸಿದ್ದಾರೆ. 1960ರಲ್ಲಿ ʻದಿಲ್ ಭೀ ತೇರಾ ಹಮ್ ಭೀ ತೇರೆʼ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಪ್ರಾರಂಭವಾಗಿ ಬಂದಿನಿ, ಅನುಪಮಾ, ಶೋಲೆ, ಚುಪ್ಕೆ ಚುಪ್ಕೆ, ಫೂಲ್ ಔರ್ ಪತ್ಥರ್, ಸೀತಾ ಔರ್ ಗೀತಾ, ಯಮ್ಲಾ ಪಗ್ಲಾ ದೀವಾನಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ, ಬಾಂದಿನಿ, ಲೈಫ್ ಇನ್ ಎ... ಮೆಟ್ರೋ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಸೇರಿದಂತೆ ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
2025ರ ಆರಂಭದಲ್ಲಿ ಧರ್ಮೇಂದ್ರ ಅವರು ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟನೆಯ ʻತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾʼ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇನ್ನೂ ಡಿಸೆಂಬರ್ 25ರಂದು ತೆರೆಕಾಣಲಿರುವ ʻಇಕ್ಕಿಸ್ʼ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.