)
Weekend Entertainment: ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಜೀ಼ ಕನ್ನಡ, ಸಂಬಂಧಗಳ ಸಂಭ್ರಮದ 'ಜೀ಼ ಕನ್ನಡ ಕುಟುಂಬ ಅವಾರ್ಡ್ಸ್-2025' ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿದೆ. ಕೋಟಿ ಕಣ್ಣುಗಳು ಕಾತುರತೆಯಿಂದ ಕಾಯುತ್ತಿರುವ ಈ ಮಹಾಪರ್ವವು ಇದೇ ತಿಂಗಳ ಅಕ್ಟೋಬರ್ 17, 18 ಮತ್ತು 19 ರಂದು ಸಂಜೆ 6:30 ರಿಂದ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಪ್ರತಿಷ್ಠಿತ ನಿರೂಪಕರಾದ ಅಕುಲ್ ಬಾಲಾಜಿ ಮತ್ತು ಅನುಶ್ರೀ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಪ್ರಮುಖ ಆಕರ್ಷಣೆಗಳು ಮತ್ತು ವಿಜೇತ ವಿಭಾಗಗಳು:
ಈ ವರ್ಷದ ಜೀ಼ ಕನ್ನಡ ಕುಟುಂಬ ಅವಾರ್ಡ್ಸ್ನಲ್ಲಿ 'ಫೇವರಿಟ್ ನಟ, ನಟಿ, ಜೋಡಿ, ಸೀರಿಯಲ್, ರಿಯಾಲಿಟಿ ಶೋ ಮತ್ತು ನಿರೂಪಕ/ನಿರೂಪಕಿ' ಸೇರಿದಂತೆ ಒಟ್ಟು ಆರು ಪ್ರಮುಖ ವಿಭಾಗಗಳ ಜೊತೆಗೆ ಅನೇಕ ವಿಭಾಗಗಳಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
ಇದೇ ವೇಳೆ, ಕನ್ನಡ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಜೊತೆಯಾಗಿ ಸಂಭ್ರಮಿಸಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ. ಚಂದನವನದ ಡಿವೈನ್ ಸ್ಟಾರ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರುಕ್ಮಿಣಿ ವಸಂತ್ ಮತ್ತು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಉಪಸ್ಥಿತಿಯು ಕಾರ್ಯಕ್ರಮದ ವಿಶೇಷವಾಗಿತ್ತು.
ವಿಶೇಷವಾಗಿ, "ವೀಕೆಂಡ್ ವಿತ್ ರಮೇಶ್ ಮಿನಿಯೇಚರ್" ಈ ಅವಾರ್ಡ್ಸ್ನಲ್ಲಿ ಅಳವಡಿಸಲಾಗಿದ್ದು, ರಿಷಬ್ ಶೆಟ್ಟಿ ಮತ್ತು ಹಿರಿಯ ನಟ ರಮೇಶ್ ಅರವಿಂದ್ ಅವರ ಮಾತುಕತೆ ಹೈಲೈಟ್ ಆಗಿತ್ತು.
ದೀಪಕ್ ಶ್ರೀರಾಮುಲು ಹೇಳಿದ್ದೇನು?
ಜೀ಼ ಕನ್ನಡ ಮತ್ತು ಕನ್ನಡ ಜೀ಼5 ನ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು ಮಾತನಾಡಿ, "ಕನ್ನಡ ಟೆಲಿವಿಷನ್ ಕುಟುಂಬದ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಆಚರಿಸುವ ಹಬ್ಬವೇ ಕುಟುಂಬ ಅವಾರ್ಡ್ಸ್. ಜೀ಼ ಕನ್ನಡ 19 ವರ್ಷ ಪೂರೈಸಿದ ಈ ಸಂದರ್ಭದಲ್ಲಿ, 'ನಾ ನಿನ್ನ ಬಿಡಲಾರೆ', 'ಕರ್ಣ', 'ಶ್ರೀ ರಾಘವೇಂದ್ರ ಮಹಾತ್ಮೆ' ಎಂಬ ಹೊಸ ಧಾರಾವಾಹಿಗಳು ಹಾಗೂ ವಿಭಿನ್ನ ರಿಯಾಲಿಟಿ ಶೋ 'ನಾವು ನಮ್ಮವರು' ವನ್ನು ಪ್ರೇಕ್ಷಕರಿಗೆ ತಂದಿದ್ದು, ಜನಮನ್ನಣೆ ಗಳಿಸಿರುವುದು ನಮ್ಮ ಹುರುಪನ್ನು ಹೆಚ್ಚಿಸಿದೆ," ಎಂದರು. ಅಲ್ಲದೆ, OTT ಪ್ಲಾಟ್ಫಾರ್ಮ್ ಕನ್ನಡ ZEE5 ಮತ್ತು ಮೈಕ್ರೋ-ಸರಣಿ ಅಪ್ಲಿಕೇಶನ್ 'ಬುಲೆಟ್' ಕೂಡ ಕನ್ನಡದ ಕಥೆಗಳನ್ನು ಮುಂದುವರೆಸುತ್ತಿವೆ ಎಂದು ತಿಳಿಸಿದರು.
ವೀಕ್ಷಕರ ಅಪಾರ ಪ್ರೀತಿ ಮತ್ತು ಸಪೋರ್ಟ್ನಿಂದ ಯಶಸ್ವಿಯಾಗಿರುವ ಈ ಕಾರ್ಯಕ್ರಮದಲ್ಲಿ, ನಿಮ್ಮ ನೆಚ್ಚಿನ ತಾರೆಯರ ನಗು-ಅಳು, ನೋವು-ನಲಿವು, ನೃತ್ಯ ಮತ್ತು ಫ್ಯಾಷನ್ ಸೇರಿದಂತೆ ಸಂಪೂರ್ಣ ಭಾವನಾತ್ಮಕ ಸಮ್ಮಿಲನವನ್ನು ಕಣ್ತುಂಬಿಕೊಳ್ಳಲು ಅಕ್ಟೋಬರ್ 17, 18 ಮತ್ತು 19 ರಂದು ಸಂಜೆ 6:30 ರಿಂದ ಜೀ಼ ಕನ್ನಡ ವಾಹಿನಿಯನ್ನು ವೀಕ್ಷಿಸಲು ಮರೆಯದಿರಿ.