)
Fruit Juice Diet: ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕ ತೂಕದಿಂದ ಬಳಲುತ್ತಿರುವವರು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ತೂಕ ಇಳಿಸಿಕೊಳ್ಳುವಲ್ಲಿ ಅವರು ಎದುರಿಸುವ ತೊಂದರೆ ಹೇಳತೀರದಂತಾಗಿದೆ. ಜಿಮ್ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾ ಕಳೆಯುವ ಅನೇಕ ಜನರಿದ್ದಾರೆ. ಇದಲ್ಲದೆ ಕೆಲವರು ಅತಿಯಾದ ವ್ಯಾಯಾಮ ಮಾಡುತ್ತಾರೆ. ಕೆಲವರು ಡಯಟ್ ಮಾಡುತ್ತಾರೆ, ಇನ್ನೂ ಕೆಲವರು ಇಂಟರ್ಮಿಡಿಯಟ್ ಫಾಸ್ಟಿಂಗ್ ಉಪವಾಸ ಮಾಡುತ್ತಾರೆ.
ಬೊಜ್ಜು ಕಡಿಮೆ ಮಾಡಿಕೊಳ್ಳಲು ಅನೇಕ ಜನರು ಈ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ತೂಕ ಇಳಿಸುವ ಹೆಸರಿನಲ್ಲಿ ಚಿತ್ರ-ವಿಚಿತ್ರ ಆಹಾರಕ್ರಮಗಳನ್ನು ಅನುಸರಿಸಿದರೆ ನೀವು ಖಂಡಿತ ಸಾಯುತ್ತೀರಿ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಡಯೆಟ್ ಮಾಡಿದ್ರೆ ನೀವು ತೂಕ ಇಳಿಸಿಕೊಳ್ಳುತ್ತೀರಿ ಎಂದು ಅನೇಕರು ಉಚಿತ ಸಲಹೆಯನ್ನು ನೀಡುತ್ತಿದ್ದಾರೆ. ನೀವು ಇದನ್ನು ತಿಂದರೆ ಸುಲಭವಾಗಿ ತೂಕ ಇಳಿಸಿಕೊಳ್ಳುತ್ತೀರಿ... ಅದನ್ನು ತಿಂದರೆ ತಿಂಗಳಲ್ಲೇ ತೂಕ ಕಡಿಮೆ ಮಾಡಿಕೊಳ್ಳುತ್ತೀರಿ... ನೀವು ಆ ಜ್ಯೂಸ್ ಕುಡಿದರೆ ಹೊಟ್ಟೆಯ ಬೊಜ್ಜು ಕರಗಿಸಬಹುದು ಅಂತಾ ಹೇಳುತ್ತಾರೆ. ನೀವೂ ಸಹ ಇಂತಹ ಪುಕ್ಕಟೆ ಸಲಹೆಯನ್ನು ಅನುಸರಿಸಿದರೆ, ಖಂಡಿತ ಸ್ವರ್ಗಕ್ಕೆ ಟಿಕೆಟ್ ಪಡೆಯುತ್ತೀರಿ. ಏಕೆಂದರೆ ಇತ್ತೀಚಿನ ಘಟನೆಯೊಂದು ಇಚ್ಛೆಯಂತೆ ಆಹಾರಕ್ರಮವನ್ನು ಅನುಸರಿಸುವವರಿಗೆ ಪಾಠವಾಗಿದೆ ಎಂದು ಹೇಳಬಹುದು.
ಹೌದು, ತಮಿಳುನಾಡಿನ ಕೊಳಚೆಲ್ ಪ್ರದೇಶದ 17 ವರ್ಷದ ಶಕ್ತೀಶ್ವರನ್ ಎಂಬ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಆಗಿದೆ. ಯಾಕೆಂದರೆ ಕಳೆದ 3 ತಿಂಗಳಿನಿಂದ ವಿವಿಧ ಯೂಟ್ಯೂಬ್ ಚಾನೆಲ್ಗಳಲ್ಲಿ ಆತ ವಿವಿಧ ರೀತಿಯ ಡಯಟ್ ವಿಡಿಯೋಗಳನ್ನ ನೋಡುವ ಮೂಲಕ ಕಟ್ಟುನಿಟ್ಟಿನ ಆಹಾರಕ್ರಮವನ್ನ ಅನುಸರಿಸುತ್ತಿದ್ದ ಎಂಬುದು ಗೊತ್ತಾಗಿದೆ. ತೂಕ ಇಳಿಸಿಕೊಳ್ಳಲು ಆತ ಯಾವುದೇ ರೀತಿಯ ಆಹಾರವನ್ನ ಸೇವಿಸದೆ ಬರೀ ನೀರು ಮತ್ತು ಜ್ಯೂಸ್ಗಳನ್ನು ಮಾತ್ರ ಕುಡಿಯುತ್ತಿದ್ದನೆಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.
ಕುಟುಂಬ ಸದಸ್ಯರ ಪ್ರಕಾರ, ಶಕ್ತೀಶ್ವರನ್ ಆಹಾರಕ್ರಮದ ಸಮಯದಲ್ಲಿ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳಲಿಲ್ಲ. ಬದಲಿಗೆ ಯೂಟ್ಯೂಬ್ ವಿಡಿಯೋದಲ್ಲಿ ನೀಡಲಾದ ಸಲಹೆಯನ್ನು ಮಾತ್ರ ಅನುಸರಿಸಿದ್ದ. ಇದರ ಭಾಗವಾಗಿ ಆತ ತೂಕ ಇಳಿಸಿಕೊಳ್ಳಲು ವಿವಿಧ ಮಾತ್ರೆಗಳನ್ನು ಸೇವಿಸುತ್ತಿದ್ದನಂತೆ. ಆಹಾರ ಸೇವಿಸುವ ಬದಲು ಬರೀ ನೀರು ಮತ್ತು ಜ್ಯೂಸ್ ಕುಡಿಯುತ್ತಿದ್ದ ಆತ ಕಠಿಣ ವ್ಯಾಯಾಮವನ್ನೂ ಮಾಡುತ್ತಿದ್ದನಂತೆ. ಉಸಿರಾಟದ ತೊಂದರೆಯಿಂದ ಆತ ಮನೆಯಲ್ಲಿಯೇ ಕುಸಿದು ಬಿದಿದ್ದನಂತೆ. ತಕ್ಷಣವೇ ಆತನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಯುವಕ ಅದಾಗಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢಪಡಿಸಿದರು. ಯುವಕನ ಸಾವಿಗೆ ನಿಖರ ಕಾರಣವನ್ನು ಕಂಡುಹಿಡಿಯಲು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಕೇರಳದ ಯುವತಿಯೊಬ್ಬಳು ಕೂಡ ಯೂಟ್ಯೂಬ್ ನೋಡಿ ಅಪಾಯಕಾರಿ ಆಹಾರ ಪದ್ಧತಿ ಅನುಸರಿಸಿ ಸಾವನ್ನಪ್ಪಿದ್ದಳು. ಕಣ್ಣೂರಿನ ಕೂತುಪರಂಬದ ಶ್ರೀನಂದ ಮೂರು ತಿಂಗಳ ಕಾಲ ಕಠಿಣ ಆಹಾರ ಪದ್ಧತಿ ಅನುಸರಿಸಿದ ನಂತರ ಪ್ರಾಣ ಕಳೆದುಕೊಂಡರು. ಈ ರೀತಿ ಚಿತ್ರ-ವಿಚಿತ್ರವಾಗಿ ಡಯಟ್ ಮಾಡಿಕೊಂಡು ಅವರಿವರು ಹೇಳುವ ಆಹಾರ ಸೇವಿಸಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.