)
Malaika Arora Fitness Tips: ಬಾಲಿವುಡ್ ನಟಿಯರು ಎಂದೊಡದೆ ನೆನಪಾಗುವುದು ಅವರ ಜೀರೋ ಸೈಜ್ ಬೆಲ್ಲಿ. ಬಾಲಿವುಡ್ ಬೆಡಗಿಯರ ಸೊಂಟಕ್ಕೆ ಪಡ್ಡೆ ಹುಡುಗರಷ್ಟೇ ಅಲ್ಲ ಮಹಿಳೆಯರೂ ಕೂಡ ಫಿದಾ ಆಗ್ತಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಈ ರೀತಿ ಹೆಣ್ಮಕ್ಕಳನ್ನೂ ಆಕರ್ಷಿಸುವ ನಟಿಯರಲ್ಲಿ ಮಲೈಕಾ ಅರೋರಾ ಕೂಡ ಒಬ್ಬರು. ವಯಸ್ಸು 50 ದಾಟಿದ್ರೂ ಅವರ ಫಿಟ್ನೆಸ್ ಗೆ ಮನಸೋಲದವರೇ ಇಲ್ಲ. ಸದಾ ನಗುಮುಖದಿಂದ ಕಾಣಿಸಿಕೊಳ್ಳುವ ನಟಿ ಮಲೈಕಾ ಅರೋರಾ ತಮ್ಮ ಸಕಾರಾತ್ಮಕ ಮನೋಭಾವದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ, 51ರ ಹರೆಯದಲ್ಲೂ ಕೂಡ ಯುವತಿಯರನ್ನೂ ನಾಚಿಸುವಂತ ಆಕರ್ಷಕ ಮೈಮಾಟ ಹೊಂದಿರುವ ನಟಿ ಇದೀಗ ಇನ್ಸ್ಟಾಗ್ರಾಮ್ನಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ತೂಕ ಇಳಿಕೆ, ವಿಶೇಷವಾಗಿ ಹೊಟ್ಟೆಯ ಕೊಬ್ಬನ್ನು ಸುಡಲು ಅನುವಾಗುವಂತಹ ನಾಲ್ಕು ಪರಿಣಾಮಕಾರಿ ವ್ಯಾಯಾಮಗಳ ಬಗ್ಗೆ ಅಳಹೆ ನೀಡಿದ್ದಾರೆ. ಇನ್ನೂ ವಿಶೇಷವೆಂದರೆ, ಈ ವ್ಯಾಯಾಮಗಳನ್ನು ಮಾಡಲು ಯಾವುದೇ ಸಲಕರಣೆಗಳ ಅಗತ್ಯವೂ ಇಲ್ಲ.
ತೂಕ ಇಳಿಕೆ, ಬೆಲ್ಲಿ ಫ್ಯಾಟ್ ಕರಗಿಸಲು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ನಟಿ ಮಲೈಕಾ ಅರೋರಾ ಶೀರ್ಷಿಕೆಯಲ್ಲಿ ಈ ರೀತಿ ಬರೆದಿದ್ದಾರೆ, "ಸ್ಟ್ರಾಂಗ್ ಕೋರ್, ಶೂನ್ಯ ಉಪಕರಣಗಳು: ಕೇವಲ ನಿಮ್ಮ ಚಾಪೆ ಮತ್ತು ಈ ವ್ಯಾಯಾಮಗಳು" ಎಂದು ಬರೆದಿದ್ದಾರೆ.
ತೂಕ ಇಳಿಕೆ, ಬೆಲ್ಲಿ ಫ್ಯಾಟ್ ಕರಗಿಸಲು ಮನೆಯಲ್ಲೇ ಮಾಡಬಹುದಾದ 4 ಶಕ್ತಿಶಾಲಿ ವ್ಯಾಯಾಮಗಳು ಹೀಗಿವೆ:-
* ಮೊಣಕಾಲಿನಿಂದ ಮೊಣಕೈಯವರೆಗೆ ಕ್ರಂಚ್ (Knee to elbow crunch):
ಒಂದು ಚಾಪೆ ಅಥವಾ ಯೋಗಾ ಮ್ಯಾಟ್ ಹಾಸಿ ಅದರಲ್ಲಿ ಮೊದಲು ನೇರವಾಗಿ ಮಲಗಿ ನಿಮ್ಮ ಕೈಗಳನ್ನು ನಿಮ್ಮ ತಲೆಯ ಹಿಂದೆ ಇಟ್ಟುಕೊಳ್ಳಬೇಕು. ನೀವು ನಿಮ್ಮ ಮೇಲಿನ ದೇಹವನ್ನು ಎತ್ತುವಾಗ, ನೀವು ನಿಮ್ಮ ಬಲ ಮೊಣಕಾಲನ್ನು ಎದೆಗೆ ಬಗ್ಗಿಸುತ್ತೀರಿ ಮತ್ತು ನಿಮ್ಮ ಮುಂಡವನ್ನು ಎಡ ಮೊಣಕೈಯಿಂದ ಬಲ ಮೊಣಕಾಲಿಗೆ ತಿರುಗಿಸುತ್ತಾ ಇದನ್ನು ಪುನರಾವರ್ತಿಸಬೇಕು.
ಈ ವ್ಯಾಯಾಮ ಆಬ್ಸ್ ಸ್ನಾಯುಗಳು ಮಾತ್ರವಲ್ಲದೆ ಸೊಂಟವನ್ನು ಬಿಗಿಗೊಳಿಸುವಲ್ಲಿಯೂ ಪರಿಣಾಮಕಾರಿ ಆಗಿದೆ. ಇದು ಸೊಂಟದ ಸುತ್ತಲಿನ ಕೊಬ್ಬನ್ನು ಬೆಣ್ಣೆಯಂತೆ ಕರಗಿಸುತ್ತದೆ.
* ಬೋಟ್ ಪೋಸ್ ಕ್ರಂಚ್ (Boat pose crunch):
ಬೋಟ್ ಪೋಸ್ ಕ್ರಂಚ್ ದೋಣಿ ಭಂಗಿಯಿಂದ ಪ್ರೇರಿತವಾಗಿದೆ. ಈ ವ್ಯಾಯಾಮವನ್ನು ಮಾಡುವಾಗ ಸಮತಲ ಸ್ಥಾನದಲ್ಲಿ, ನಿಮ್ಮ ತೋಳುಗಳು ನಿಮ್ಮ ಕಾಲುಗಳಿಗೆ ಸಮಾನಾಂತರವಾಗಿರುವಂತೆ ಚಾಚಿ. ದೇಹದ ಮೇಲ್ಭಾಗವನ್ನು ಮೇಲಕ್ಕೆತ್ತುತ್ತಾ ಅದೇ ಸಮಯದಲ್ಲಿ ನಿಮ್ಮ ಕಾಲುಗಳನ್ನು ವಿಸ್ತರಿಸಿ. ನಿಮ್ಮ ದೇಹವನ್ನು V ಆಕಾರದಲ್ಲಿ ಮಾಡಿ. ಕೈಗಳನ್ನು ನೇರವಾಗಿ ಮುಂದಕ್ಕೆ ಚಾಚಿ ಎಷ್ಟು ಸಾಧ್ಯವೋ ಅಷ್ಟು ನೇರವಾಗಿ ಮುಂದಕ್ಕೆ ಚಾಚಿ. ಈ ಕ್ರಂಚ್ ಮಾಡುವಾಗ ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಯ ಕಡೆಗೆ ಇಡಬೇಕು, ನಂತರ ನಿಮ್ಮ ಕಾಲುಗಳನ್ನು ಆರಂಭಿಕ ಸ್ಥಾನಕ್ಕೆ ಹಿಂತಿರುಗಿಸಬೇಕು. ಈ ಆಸನವು ಸ್ನಾಯುಗಳನ್ನು ಬಲಪಡಿಸಲು ಸೂಕ್ತವಾಗಿದೆ. ಕೆಳಗಿನ ಎಬಿಎಸ್ ಅನ್ನು ಬಿಗಿಗೊಳಿಸಲು ಹಾಗೂ ತೊಡೆಗಳು ಮತ್ತು ಸೊಂಟದ ಫ್ಲೆಕ್ಸರ್ಗಳನ್ನು ಬಿಗಿಗೊಳಿಸಲು ಈ ಆಸನವು ಅತ್ಯುತ್ತಮವಾಗಿದೆ ಎಂದು ನಟಿ ಮಲೈಕಾ ಅರೋರಾ ಸಲಹೆ ನೀಡಿದ್ದಾರೆ.
* ಆಂಕಲ್ ಟಕ್ ಕ್ರಂಚ್ (Ankle Tuck Crunch):
ಸಾಮಾನ್ಯವಾಗಿ, ದೇಹದ ತೂಕವನ್ನು ಕಳೆದುಕೊಳ್ಳುವಲ್ಲಿ ಅತ್ಯಂತ ಕ್ಲಿಷ್ಟಕರ ಎಂದರೆ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸುವುದು. ಆದರೆ, ಆಂಕಲ್ ಟಕ್ ಕ್ರಂಚ್ ಹೊಟ್ಟೆಯ ಕೆಳಭಾಗದ ಮೇಲೆ ನೇರ ಪರಿಣಾಮ ಉಂಟುಮಾಡುವ ಕಠಿಣ ವ್ಯಾಯಾಮವಾಗಿದೆ. ನಿಮ್ಮ ತೋಳುಗಳನ್ನು ತಲೆಯ ಮೇಲೆ ಚಾಚಿ ಮತ್ತು ನಿಮ್ಮ ಕಾಲುಗಳನ್ನು ಚಾಚಿ. ನಿಮ್ಮ ಮುಂಡ ಮತ್ತು ಕಾಲುಗಳನ್ನು ಒಂದೇ ಸಮಯದಲ್ಲಿ ಎತ್ತುವಂತೆ ನಿಮ್ಮ ಮಧ್ಯಭಾಗವನ್ನು ತೊಡಗಿಸಿಕೊಳ್ಳಿ. ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಯ ಕಡೆಗೆ ಬಗ್ಗಿಸಿ ಮತ್ತು ನಿಮ್ಮ ತೋಳುಗಳನ್ನು ಮುಂದಕ್ಕೆ ತನ್ನಿ. ನಿಮ್ಮ ತೋಳುಗಳನ್ನು ನಿಮ್ಮ ಮೊಣಕಾಲುಗಳಿಗೆ ಸಮಾನಾಂತರವಾಗಿ ಇರಿಸಿ ಮತ್ತು ನಿಮ್ಮ ಕಣಕಾಲುಗಳನ್ನು ಸ್ಪರ್ಶಿಸಲು ಪ್ರಯತ್ನಿಸಿ.
* ವಿ-ಸಿಟ್ ಹೋಲ್ಡ್ (V-Sit Hold):
ಮೊದಲಿಗೆ ಚಾಪೆ ಮೇಲೆ ಮಲಗಿ ನಿಮ್ಮ ತೋಳುಗಳನ್ನು ದೇಹದ ಪಕ್ಕದಲ್ಲಿ ನೆರವಾಗಿರಿಸಿ. ಕಾಲುಗಳನ್ನು ಚಾಚಿ, ಎರಡೂ ಕಾಲುಗಳನ್ನು ಕೋನಾಕಾರದಲ್ಲಿ ಮೇಲಕ್ಕೆತ್ತುತ್ತಾ ನಿಮ್ಮ ಮುಂಡವನ್ನು ನೆಲದಿಂದ ಮೇಲಕ್ಕೆತ್ತಿ ಮತ್ತು ನಿಮ್ಮ ತೋಳುಗಳನ್ನು ನಿಮ್ಮ ಕಾಲುಗಳಿಗೆ ಸಮಾನಾಂತರವಾಗಿ (V ನಂತೆ) ಚಾಚಿ. ಸ್ವಲ್ಪ ಸಮಯದವರೆಗೆ ಇದೇ ಭಂಗಿಯಲ್ಲಿರಿ. ಇದನ್ನು ವಿ-ಸಿಟ್ ಹೋಲ್ಡ್ ಎನ್ನಲಾಗುತ್ತದೆ. ಈ ಆಸನ ಮಾಡುವುದರಿಂದ ಎಬಿಎಸ್, ಕೆಳ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಫ್ಯಾಟ್ ಕರಗಿಸಲು ಲಾಭದಾಯಕ ಎಂದು ಸಾಬೀತುಪಡಿಸಲಿದೆ.
ನಟಿ ಮಲೈಕಾ ಅರೋರ ಶೇರ್ ಮಾಡಿರುವ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:-
ಒಟ್ಟಾರೆಯಾಗಿ ದುಬಾರಿ ಜಿಮ್ ಸೆಟಪ್ಗಾಗಿ ಸಾವಿರ ಡಾಲರ್ಗಳನ್ನು ಖರ್ಚು ಮಾಡದೆಯೇ ತಮ್ಮ ಶಕ್ತಿಯನ್ನು ಬಳೆಸಿ, ಹೆಚ್ಚು ಫಿಟ್ ಆಗಬಹುದು ಎಂಬುದು ನಟಿ ಮಲೈಕಾ ಅರೋರಾ ವಿಡಿಯೋದಲ್ಲಿ ತೋರಿಸಿಕೊಟ್ಟಿದ್ದಾರೆ.