)
Blood Pressure Control: ಡಯಾಬಿಟಿಸ್ ಸಮಸ್ಯೆಯಂತೆಯೇ ರಕ್ತದೊತ್ತಡ ಸಮಸ್ಯೆ ಇರುವವರೂ ಸಹ ಪ್ರತಿದಿನ ಔಷಧಿ ತೆಗೆದುಕೊಳ್ಳಬೇಕು. ಆದರೆ, ಕೆಲವರು ನಿರಂತರವಾಗಿ ಔಷಧಿಗಳನ್ನು ತೆಗೆದುಕೊಂಡರೂ ಬಿಪಿ ಕಂಟ್ರೋಲ್ಗೆ ಬರುತ್ತಿಲ್ಲ ಎಂದು ದೂರುತ್ತಾರೆ. ಈ ಸಮಸ್ಯೆ ಗೊತ್ತೋ/ಗೊತ್ತಿಲ್ಲದೆಯೋ ಅವರು ಮಾಡುವ ತಪ್ಪುಗಳೇ ಪ್ರಮುಖ ಕಾರಣವಾಗಿದೆ.
ಔಷಧಿ ತೆಗೆದುಕೊಳ್ಳುತ್ತಿದ್ದರೂ ಬಿಪಿ ನಿಯಂತ್ರಣಕ್ಕೆ ಬಾರದಿರಲೂ ಇರುವ ಪ್ರಮುಖ ಕಾರಣಗಳೆಂದರೆ:-
ತಪ್ಪು ಸಮಯದಲ್ಲಿ ಔಷಧಿ ಸೇವನೆ:
ಬಿಪಿ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಕೆಲವರು ಒಂದು ದಿನ ಬೆಳಿಗ್ಗೆ ಮಾತ್ರೆ ತೆಗೆದುಕೊಂಡರೆ, ಇನ್ನೊಂದು ದಿನ ಮಧ್ಯಾಹ್ನ, ಮತ್ತೊಂದು ದಿನ ರಾತ್ರಿ ವೇಳೆ ಬಿಪಿ ಮಾತ್ರೆ ತೆಗೆದುಕೊಳ್ಳುತ್ತಾರೆ. ಈ ರೀತಿ ಬಿಪಿ ಔಷಧಿ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
ಬಿಪಿ ಮಾತ್ರೆ ತೆಗೆದುಕೊಳ್ಳದಿರುವುದು:
ಬಹುತೇಕ ಜನರು ನಿರಂತರವಾಗಿ ಬಿಪಿ ಮಾತ್ರೆಯನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ತಿಳಿದಿದ್ದರೂ ಸಹ ಕೆಲವೊಮ್ಮೆ ಮರೆತು ಔಷಧಿ ತೆಗೆದುಕೊಳ್ಳುವುದಿಲ್ಲ. ಇನ್ನೂ ಕೆಲವೊಮ್ಮೆ, ಕೋಪದಿಂದಲೋ ಅಥವಾ ಇನ್ನಾವುದೋ ಕಾರಣದಿಂದಾಗಿ ಬಿಪಿ ಮಾತ್ರೆ ತೆಗೆದುಕೊಳ್ಳುವುದನ್ನು ತಪ್ಪಿಸುತ್ತಾರೆ. ಈ ರೀತಿ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ಏರುಪೇರಾಗುತ್ತದೆ.
ಕಳಪೆ ಆಹಾರ ಪದ್ದತಿ:
ಬಿಪಿ ಇದ್ದವರು ಹೆಚ್ಚು ಉಪ್ಪು ತಿನ್ನಬಾರದು ಎಂದು ತಿಳಿದಿರುತ್ತದೆ. ಆದರೆ, ಕೇವಲ ಉಪ್ಪು ಮಾತ್ರವಲ್ಲ, ಕಳಪೆ ಆಹಾರಪದ್ದತಿ, ಜಂಕ್ ಆಹಾರಗಳ ಸೇವನೆಯಿಂದಾಗಿಯೂ ಬಿಪಿ ಕಂಟ್ರೋಲ್ಗೆ ಬಾರದೇ ಇರಬಹುದು.
ಧೂಮಪಾನ, ಮದ್ಯಪಾನ:
ರಕ್ತದೊತ್ತಡ ಸಮಸ್ಯೆ ಇದ್ದವರು ಧೂಮಪಾನ, ಮದ್ಯಪಾನ ಮಾಡುವುದರಿಂದಲೂ ಬಿಪಿ ನಿಯಂತ್ರಣಕ್ಕೆ ತರುವುದು ಕಷ್ಟಸಾಧ್ಯವಾಗುತ್ತದೆ.
ಮಾನಸಿಕ ಒತ್ತಡ ಮತ್ತು ನಿದ್ರಾಹೀನತೆ:
ಈ ಒತ್ತಡಭರಿತ ಜೀವನಶೈಲಿಯಲ್ಲಿ ಕೆಲಸದ ಒತ್ತಡ, ಸ್ಟ್ರೆಸ್ ಅಥವಾ ನಿದ್ರೆಯ ಕೊರತೆಯು ಬಿಪಿ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಾಗಿ, ಔಷಧಿ ತೆಗೆದುಕೊಂಡರೂ ನಿಯಂತ್ರಣ ಸಾಧಿಸಲು ತೊಂದರೆಯಾಗಬಹುದು.
ಬಲವಾದ ಔಷಧಿಯ ಅಗತ್ಯವಿರಬಹುದು:
ಕೆಲವೊಮ್ಮೆ ನೀವು ತೆಗೆದುಕೊಳ್ಳುತ್ತಿರುವ ಔಷಧೀಯ ಡೊಸೇಜ್ ಹೆಚ್ಚು-ಕಡಿಮೆ ಇದ್ದಾಗಲೂ ಸಹ ಬಿಪಿ ನಿಯಂತ್ರಣಕ್ಕೆ ಬಾರದಿರಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಔಷಧಿಯನ್ನು ಪಡೆಯುವುದು ಮುಖ್ಯ.
ಇತರೆ ಆರೋಗ್ಯ ಸಮಸ್ಯೆಗಳು:
ಮೇಲೆ ತಿಳಿಸಿದ ಕಾರಣಗಳನ್ನು ಹೊರತುಪಡಿಸಿ ಥೈರಾಯ್ಡ್, ಕಿಡ್ನಿ ತೊಂದರೆ, ಹಾರ್ಮೋನ್ ಅಸಮತೋಲನದಂತಹ ಸಮಸ್ಯೆಗಳು ಇದ್ದಾಗಲೂ ಸಹ ಬಿಪಿ ಏರುಪೇರಾಗುವ ಸಾಧ್ಯತೆ ಇದೆ.
ಎಲ್ಲಕ್ಕಿಂತ ಮುಖ್ಯವಾಗಿ, ಬಿಪಿ ನಿಯಂತ್ರಣಕ್ಕೆ ಔಷಧಿ ಮಾತ್ರವಲ್ಲ ನಾವು ಸೇವಿಸುವ ಆಹಾರ, ನಿದ್ರೆ, ವ್ಯಾಯಾಮ, ಮನಸ್ಥಿತಿ ಎಲ್ಲವೂ ಸಹ ಸಮರ್ಪಕವಾಗಿರಬೇಕು. ಈ ಎಲ್ಲದಕ್ಕೂ ಸಮಬಲ ನೀಡಿದಾಗ ಮಾತ್ರ ಔಷಧಿಗೆ ಸರಿಯಾದ ಸ್ಪಂದನೆ ಸಿಗುತ್ತದೆ. ಪ್ರತಿದಿನವೂ ಔಷಧಿಯ ಸಮಯವನ್ನು ಸರಿಯಾಗಿ ಪಾಲಿಸಿ, ಆರೋಗ್ಯಕರ ಆಹಾರ ಸೇವಿಸಿ, ತೀವ್ರ ಒತ್ತಡದಿಂದ ದೂರವಿರಿ ಮತ್ತು ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸಿ. ಇದರಿಂದ ನೀವು ಬಿಪಿಯನ್ನು ನಿಖರವಾಗಿ ನಿಯಂತ್ರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.