)
Soaked Almonds Side Effects: ಬಾದಾಮಿಯನ್ನು ಆರೋಗ್ಯದ ಖಜಾನೆ ಎಂತಲೇ ಕರೆಯಲಾಗುತ್ತದೆ. ರಾತ್ರಿ ವೇಳೆ ಒಂದೆರಡು ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದರ ಸಿಪ್ಪೆ ಸುಲಿದು ತಿನ್ನುವುದರಿಂದ ಇದು ಆರೋಗ್ಯಕ್ಕೆ ಅಗಾಧ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಆದರೆ, ಅಮೃತವೇ ಆದರೂ ಅತಿಯಾದರೆ ವಿಷ ಎಂಬಂತೆ ಬಾದಾಮಿಯನ್ನು ಪ್ರತಿದಿನ ಅತಿಯಾಗಿ ತಿನ್ನುವುದರಿಂದ ಅದು ದೇಹಕ್ಕೆ ತೊಂದರೆಯುಂಟುಮಾಡುತ್ತದೆ. ನೀರಲ್ಲಿ ನೆನೆಯಿಸಿದ ಬಾದಾಮಿಯೂ ಇದಕ್ಕೆ ಹೊರತಲ್ಲ.
ಅತಿಯಾದ ಬಾದಾಮಿ ಸೇವನೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು:-
ಕಿಡ್ನಿ ಸ್ಟೋನ್:
ಬಾದಾಮಿಯಲ್ಲಿ ‘ಆಕ್ಸ್ಲೆಟ್’ಎಂಬ ಅಂಶ ಇರುತ್ತದೆ. ಇದರ ಅತಿಯಾಗಿ ಸೇವನೆಯು ಕೆಲವೊಮ್ಮೆ ಕಿಡ್ನಿಯಲ್ಲಿ ಕಲ್ಲು ರೂಪವಾಗಲು ಕಾರಣವಾಗಬಹುದು. ವಿಶೇಷವಾಗಿ ಕಿಡ್ನಿ ಸಮಸ್ಯೆಯುಳ್ಳವರು ಹೆಚ್ಚು ಎಚ್ಚರಿಕೆಯಿಂದ ಇರುವುದು ಉತ್ತಮ. ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ಬಾದಾಮಿ ಸೇವನೆಯಿಂದ ಅಪಾಯ ಖಚಿತ ಎನ್ನಲಾಗುತ್ತದೆ.
ಜೀರ್ಣಕ್ರಿಯೆ ಸಮಸ್ಯೆ:
ಹೆಚ್ಚು ಬಾದಾಮಿ ತಿಂದರೆ ಅಜೀರ್ಣ, ಉದರ ವಾಯು, ಅಥವಾ ಮಲಬದ್ಧತೆ ಕಾಣಿಸಬಹುದು. ಇದು ಸೂಕ್ಷ್ಮ ಜೀರ್ಣಕ್ರಿಯೆ ಹೊಂದಿರುವವರು ವೈದ್ಯರ ಸಲಹೆ ಮೇರೆಗೆ ಬಾದಾಮಿ ಸೇವಿಸುವುದು ಒಳಿತು.
ತಲೆನೋವು, ತಲೆಸುತ್ತು:
ಇನ್ನೊಂದು ಪ್ರಮುಖ ಅಂಶವೆಂದರೆ, ಬಾದಾಮಿಯಲ್ಲಿ ‘ವಿಟಮಿನ್ ಇ’ ಅಂಶ ಹೆಚ್ಚಿರುತ್ತದೆ. ಇದನ್ನು ಮಿತಿಗಿಂತ ಹೆಚ್ಚು ತೆಗೆದುಕೊಂಡರೆ ಶರೀರದಲ್ಲಿ ವಿಟಮಿನ್ ಇ ಹೆಚ್ಚಾಗುವ ಮೂಲಕ ತಲೆಸುತ್ತು, ತ್ವರಿತ ಶ್ವಾಸ ಅಥವಾ ತಲೆನೋವುಗಳಂತಹ ಲಕ್ಷಣಗಳು ಕಾಣಿಸಬಹುದು.
ಅಲರ್ಜಿ:
ಕೆಲವರಿಗೆ ಬಾದಾಮಿಗಳಿಂದ ಅಲರ್ಜಿ ಕೂಡ ಇರಬಹುದು. ಬಾದಾಮಿಗೆ ಅಲರ್ಜಿ ಇರುವವರು ನೀರಲ್ಲಿ ನೆನೆಸಿದ ಬಾದಾಮಿಯನ್ನು ಸಹ ತಿನ್ನುವಂತಿಲ್ಲ. ಇಂತಹವರಿಗೆ ತಕ್ಷಣ ಚರ್ಮದಲ್ಲಿ ಅಲರ್ಜಿ, ಉಬ್ಬರ, ಉಸಿರಾಟದ ತೊಂದರೆಗಳು ಉಂಟಾಗಬಹುದು.
ಇದೇ ರೀತಿ, ನೀರಲ್ಲಿ ಬಾದಾಮಿ ನೆನೆಸಿ ಅದರ ಸಿಪ್ಪೆ ತೆಗೆದು ತಿನ್ನುವುದರಿಂದ ಇದರ ಪೋಷಕಾಂಶಗಳು ಕಡಿಮೆಯಾಗುವ ಸಾಧ್ಯತೆಯೂ ಇದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ಈ ಕುರಿತಂತೆ ಸಂಶೋಧನೆ ನಡೆಯುತ್ತಿದೆ. ಹೀಗಾಗಿ, ಬಾದಾಮಿ ದೇಹಕ್ಕೆ ಒಳ್ಳೆಯದಾದರೂ ಅದನ್ನು ಮಿತವಾಗಿ ಸೇವಿಸಿದರೆ ಮಾತ್ರ ಆರೋಗ್ಯಕ್ಕೆ ಧನಾತ್ಮಕ ಪ್ರಯೋಜನಗಳನ್ನು ನೀಡುತ್ತದೆ. ವೈದ್ಯರ ಪ್ರಕಾರ, ದಿನಕ್ಕೆ 3-5 ಬಾದಾಮಿ ತಿನ್ನುವುದು ಒಳ್ಳೆಯದು. ಅದಕ್ಕಿಂತ ಹೆಚ್ಚಿನ ಬಾದಾಮಿ ಸೇವನೆ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.