)
heart attack risk morning: ಹೃದಯಾಘಾತ ಸಮಸ್ಯೆ ಇತ್ತೀಚೆಗೆ ಜನರನ್ನು ಆತಂಕಕ್ಕೀಡು ಮಾಡಿದೆ. ಇದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆ ಹೆಚ್ಚಾಗಲು ಕಾರಣಗಳು ವೈವಿದ್ಯವಾಗಿದ್ದರೂ ನಮ್ಮ ಪ್ರತಿನಿತ್ಯದ ಜೀವನಶೈಲಿ ಬಹಳ ಪರಿಣಾಮ ಬೀರುತ್ತದೆ. ತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಅಷ್ಟೇ ಅಲ್ಲ ನಾವು ತಿಳಿಯದೇ ಮಾಡುವ ಕೆಲವು ತಪ್ಪುಗಳು ಈ ತೊಂದರೆ ಹೆಚ್ಚಾಗಲು ದಾರಿ ಮಾಡಿಕೊಡುತ್ತವೆ. ಆದ್ದರಿಂದ ನಮ್ಮ ಬೆಳಗ್ಗೆ ಆರೋಗ್ಯದಿಂದ ಕೂಡಿರಬೇಕು ಇದು ಎಲ್ಲದಕ್ಕಿಂತ ಬಹಳ ಮುಖ್ಯ.
ಇತ್ತೀಚೆಗೆ ಹೃದ್ರೋಗ ತಜ್ಞರು ಹಾರ್ಟ್ಅಟ್ಯಾಕ್ ತಡೆಯಲು ಪರಿಣಾಮಕಾರಿಯಾದ ಅಂಶವೊಂದನ್ನು ತಿಳಿಸಿದ್ದಾರೆ. ಅದೇನೆಂದರೆ ಬೆಳಗಿನ ಹೊತ್ತಿನಲ್ಲಿ ಆರೋಗ್ಯದತ್ತ ಹೆಚ್ಚಾಗಿ ಗಮನ ಹರಿಸುವುದು. ಮುಂಜಾನೆ 7 ರಿಂದ 11 ಗಂಟೆಯವರೆಗಿನ ಸಮಯ ಹೃದಯಕ್ಕೆ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಏಕೆ ಗೊತ್ತಾ..? ಅದಕ್ಕೆ ಇಲ್ಲಿದೆ ನೋಡಿ ಉತ್ತರ..
ಬೆಳಿಗ್ಗೆ ಹೃದಯಕ್ಕೆ ಏಕೆ ಅಪಾಯ?
ತಜ್ಞರ ವಿವರಣೆ ಪ್ರಕಾರ, ನಾವು ಎದ್ದ ಕೂಡಲೇ ದೇಹದಲ್ಲಿ ಕೆಲವು ನೈಸರ್ಗಿಕ ಬದಲಾವಣೆಗಳು ಸಂಭವಿಸುತ್ತವೆ:
ಕಾರ್ಟಿಸೋಲ್ ಎಂಬ ಒತ್ತಡ ಹಾರ್ಮೋನ್ ಮಟ್ಟ ಏರಿಕೆಯಾಗುತ್ತದೆ.
ರಕ್ತದಲ್ಲಿನ ಪ್ಲೇಟ್ಲೆಟ್ಗಳು ಜಿಗುಟಾಗುತ್ತವೆ, ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಸಾಧ್ಯತೆ ಹೆಚ್ಚುತ್ತದೆ. ರಕ್ತದೊತ್ತಡ ಏಕಾಏಕಿ ಏರುತ್ತದೆ.
ದೇಹದಲ್ಲಿ ಆಗುವ ಈ ಧಿಡೀರ್ ಬದಲಾವಣೆಯಿಂದ ಹೃದಯಕ್ಕೆ ಸಾಮಾನ್ಯಕ್ಕಿಂತ ಹೆಚ್ಚು ಶ್ರಮವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾರಾದರೂ ತೀವ್ರ ಒತ್ತಡ ಅನುಭವಿಸಿದರೆ ಅಥವಾ ಹೆಚ್ಚಿನ ಶಾರೀರಿಕ ಒತ್ತಡ ಅನುಭವಿಸಿದರೆ, ಹೃದಯಾಘಾತ ಅಥವಾ ಹಠಾತ್ ಹೃದಯ ಸ್ತಂಭನದ ಅಪಾಯ ಹೆಚ್ಚಾಗುತ್ತದೆ. ಅಧ್ಯಯನಗಳ ಪ್ರಕಾರ, ಹೃದಯಾಘಾತ ಹಾಗೂ ಹಠಾತ್ ಸಾವುಗಳು ಹೆಚ್ಚಾಗಿ ಬೆಳಿಗ್ಗೆ 7 ರಿಂದ 11ರೊಳಗೆ ಸಂಭವಿಸುತ್ತವೆ. ಸಂಜೆ 5 ರಿಂದ 6ರವರೆಗೂ ಸ್ವಲ್ಪ ಮಟ್ಟಿನ ಅಪಾಯ ಕಂಡುಬರುತ್ತದೆ.
ಹೃದಯವನ್ನು ರಕ್ಷಿಸುವ ಸರಳ ಮಾರ್ಗಗಳು
ಬೆಳಗಿನ ಕೆಲವು ಸರಳ ಅಭ್ಯಾಸ ಬದಲಾವಣೆಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕ:
ಎದ್ದ ತಕ್ಷಣವೇ ಒತ್ತಡದ ಕೆಲಸಗಳನ್ನು ಪ್ರಾರಂಭಿಸಬೇಡಿ.
ನಿಧಾನವಾಗಿ ಎದ್ದು, ಕೆಲ ನಿಮಿಷ ಆಳವಾದ ಉಸಿರಾಟ ಮಾಡಿ.
ಬೆಳಗಿನ ಉಪಾಹಾರವನ್ನು ತಪ್ಪದೆ ಸೇವಿಸಿ.
ತೀವ್ರ ವ್ಯಾಯಾಮಕ್ಕಿಂತ ಸಣ್ಣ ಚಟುವಟಿಕೆಗಳಿಂದ ದಿನವನ್ನು ಆರಂಭಿಸಿ.
ನಿಯಮಿತ ನಿದ್ರೆ ಹಾಗೂ ಸಮತೋಲನದ ಜೀವನಶೈಲಿಯನ್ನು ಪಾಲಿಸಿ.
ಹೃದಯದ ಆರೈಕೆಗೆ ಬೆಳಗಿನ ಸಮಯ ಅತ್ಯಂತ ಪ್ರಮುಖ. ಸಣ್ಣ ತಪ್ಪುಗಳು ದೊಡ್ಡ ಅಪಾಯವನ್ನು ತರಬಹುದು. ಆದ್ದರಿಂದ ದಿನವನ್ನು ಶಾಂತವಾಗಿ ಮತ್ತು ಸಮತೋಲನದಿಂದ ಪ್ರಾರಂಭಿಸುವುದು ಹೃದಯಕ್ಕೆ ಒಳ್ಳೆಯದು.