Sugarcane Juice vs Tender Coconut: ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ತಂಪು ಪಾನೀಯಗಳು ತುಂಬಾ ಪ್ರಯೋಜನಕಾರಿ ಆಗಿವೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುವುದು ಹಾಗೂ ಹೈಡ್ರೀಕರಿಸುವುದು ಅತ್ಯವಶ್ಯಕ. ಇದಕ್ಕಾಗಿ ಸಕ್ಕರೆ ಹೆಚ್ಚಾಗಿರುವ ಪಾನೀಯಗಳಿಗಿಂತ ನೈಸರ್ಗಿಕ ಪಾನೀಯಗಳು ಅತ್ಯುತ್ತಮವೆಂದು ಹೇಳಲಾಗುತ್ತದೆ.

Sugarcane Juice vs Tender Coconut: ದಿನೇ ದಿನೇ ಬಿರು ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಆಯಾಸ, ನಿರ್ಜಲೀಕರಣದಂತಹ ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ. ನಿರ್ಜಲೀಕರಣದಿಂದ ಪರಿಹಾರ ಪಡೆಯಲು ದೇಹವನ್ನು ತಂಪಾಗಿಡುವುದು ಅಗತ್ಯ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಅಧಿಕ ಸಕ್ಕರೆಯುಕ್ತ ಕೆಮಿಕಲ್ ಮಿಶ್ರಿತ ತಂಪು ಪಾನೀಯಗಳಿಗಿಂತ ನಿಸರ್ಗದತ್ತವಾಗಿ ಸಿಗುವ ಎಳನೀರು, ಸಕ್ಕರೆ ಹಾಕದೆ ತಯಾರಿಸುವ ಕಬ್ಬಿನ ಹಾಲಿನಂತಹ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುವ ನೈಸರ್ಗಿಕ ಪಾನೀಯಗಳನ್ನು ಬಳಸುವುದು ಒಳ್ಳೆಯ ಆಯ್ಕೆ ಎಂದು ವೈದ್ಯರು ಸಲಹೆ ನೀಡುತ್ತಾರೆ.
ಕಬ್ಬಿನ ಹಾಲು ಮತ್ತು ಎಳನೀರು ಎಲ್ಲೆಡೆ ಬಹಳ ಸುಲಭವಾಗಿ ಸಿಗುವ ನೈಸರ್ಗಿಕ ಪಾನೀಯಗಳು. ಈ ಎರಡೂ ಜನಪ್ರಿಯ ಪಾನೀಯಗಳು ಸಹ ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನವನ್ನು ಒದಗಿಸುತ್ತವೆ. ಆದಾಗ್ಯೂ, ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಕಬ್ಬಿನ ಹಾಲು vs ಎಳನೀರು ಇವೆರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಕಬ್ಬಿನ ಹಾಲು vs ಎಳನೀರು:
ಮೊದಲೇ ತಿಳಿಸಿದಂತೆ ಕಬ್ಬಿನ ಹಾಲು ಮತ್ತು ಎಳನೀರು ಎರಡೂ ಸಹ ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ.
ಕಬ್ಬಿನ ಹಾಲು:
ಕಬ್ಬಿನ ಹಾಲು ಸಂಪೂರ್ಣವಾಗಿ ನೈಸರ್ಗಿಕ ಪಾನೀಯ. ಇದರ ಪ್ರಮುಖ ಲಕ್ಷಣವೆಂದರೆ ಕಬ್ಬಿನ ಹಾಲು ಕುಡಿದೊಡನೆ ದೇಹಕ್ಕೆ ತಕ್ಷಣ ಶಕ್ತಿ ದೊರೆಯುತ್ತದೆ. ಹೆಚ್ಚಿನ ಶಾಖದಲ್ಲಿ ದಣಿದ ದೇಹಕ್ಕೆ ಇದು ಬೇಗನೆ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ, ಕಬ್ಬಿನ ರಸವು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಯಕೃತ್ತು ಸರಾಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಕಬ್ಬಿನ ಹಾಲಿನ ಪ್ರಯೋಜನಗಳು:
* ಕಬ್ಬಿನ ಹಾಲಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಇದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಅಲ್ಲದೆ, ಬೇಸಿಗೆಯ ಸೋಂಕುಗಳಿಂದ ದೂರ ಉಳಿಸುವಲ್ಲಿ ಪರಿಣಾಮಕಾರಿ ಆಗಿದೆ.
* ಕಬ್ಬಿನ ಹಾಲನ್ನು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
* ಕಬ್ಬಿನ ಹಾಲು ಕುಡಿಯುವುದರಿಂದ ಇದು ಹೀಟ್ ಸ್ಟ್ರೋಕ್ನಂತಹ ಅಪಾಯದಿಂದ ರಕ್ಷಣೆ ಒದಗಿಸುತ್ತದೆ.
* ಕಬ್ಬಿನ ಹಾಲಿನಲ್ಲಿರುವ ನೈಸರ್ಗಿಕ ಪೋಷಕಾಂಶಗಳು ದೇಹವನ್ನು ಹೈಡ್ರೀಕರಿಸುತ್ತದೆ. * ಕಬ್ಬಿನ ಹಾಲು ಕುಡಿಯುವುದರಿಂದ ಇದು ಚರ್ಮವನ್ನು ಒಳಗಿನಿಂದ ಕಾಂತಿಯುತವಾಗಿರಿಸುವಲ್ಲಿ ಸಹಕಾರಿ ಆಗಿದೆ.
ಎಳನೀರು:
ನೈಸರ್ಗಿಕ ಪಾನೀಯ ಎಂದೊಡನೆ ಮೊದಲು ನೆನಪಾಗುವುದೇ ಎಳನೀರು. ಇದು ದೇಹಕ್ಕೆ ಜಲಸಂಚಯನದ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ.
ಎಳನೀರಿನ ಪ್ರಯೋಜನಗಳು:
>> ಎಳನೀರು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.
>> ಎಳನೀರು ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆಮ್ಲೀಯತೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
>> ಎಳನೀರಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
>> ಎಳನೀರು ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಮನೆಮದ್ದಾಗಿ ಕಾರ್ಯನಿರ್ವಹಿಸುತ್ತದೆ.
ಕಬ್ಬಿನ ಹಾಲು vs ಎಳನೀರು: ಬೇಸಿಗೆಯಲ್ಲಿ ಯಾವುದು ಉತ್ತಮ ಪಾನೀಯ?
ಕಬ್ಬಿನ ಹಾಲು ಮತ್ತು ಎಳನೀರು ಎರಡೂ ಸಹ ಉತ್ತಮ ಪೋಷಕಾಂಶಗಳಿಂದ ತುಂಬಿದ್ದು ಅವೆರಡೂ ಸಹ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿವೆ. ಕಬ್ಬಿನ ಹಾಲು vs ಎಳನೀರು ಎರಡರಲ್ಲಿ ಯಾವುದು ಉತ್ತಮ ಪಾನೀಯ ಎಂಬುದು ಅವರವರ ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ದೇಹಕ್ಕೆ ತ್ವರಿತ ಶಕ್ತಿ ಅಗತ್ಯವಿದ್ದವರಿಗೆ ಕಬ್ಬಿನ ಹಾಲು ಸೂಕ್ತವೆನಿಸಬಹುದು. ನಿರ್ಜಲೀಕರಣದಿಂ ಬಳಲುತ್ತಿರುವವರಿಗೆ ಎಳನೀರು ಉತ್ತಮ ಪಾನೀಯ ಎಂದು ಸಾಬೀತುಪಡಿಸಬಹುದು.
ಒಟ್ಟಾರೆಯಾಗಿ ಬಿಸಿಲಿನ ಬೇಗೆಯಿಂದ ದೇಹವನ್ನು ರಕ್ಷಿಸಲು ಮಾರುಕಟ್ಟೆಯಲ್ಲಿ ಸಿಗುವ ಬೇರೆ ಪಾನೀಯಗಳಿಗಿಂತ ಕಬ್ಬಿನ ಹಾಲು ಮತ್ತು ಎಳನೀರು ಉತ್ತಮ ಆಯ್ಕೆಗಳಾಗಿವೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.