)
Sugar effects on hair health: ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಸಾಮಾನ್ಯವಾಗಿ ವಯಸ್ಸಿನ ಲಕ್ಷಣ. ಆದರೆ ಇಂದಿನ ದಿನಗಳಲ್ಲಿ ಹಲವರು ಸಣ್ಣ ವಯಸ್ಸಿನ್ನಲ್ಲೇ ಅಕಾಲಿಕವಾಗಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಆನುವಂಶಿಕತೆ, ಒತ್ತಡ, ಮಾಲಿನ್ಯ, ಥೈರಾಯ್ಡ್ ಸಮಸ್ಯೆ, ರಕ್ತಹೀನತೆ, ಪ್ರೋಟೀನ್ ಕೊರತೆ ಮೊದಲಾದ ಹಲವು ಕಾರಣಗಳಿವೆ. ಆದರೆ ಇವುಗಳ ಜೊತೆಗೆ ನಮ್ಮ ಆಹಾರ ಪದ್ಧತಿಯೂ ದೊಡ್ಡ ಪಾತ್ರವಹಿಸುತ್ತದೆ. ಇದನ್ನು ಸ್ವತಃ ವೈದ್ಯರೇ ಬಹಿರಂಗಪಡಿಸಿದ್ದಾರೆ.
ಅದರಲ್ಲೂ ಹೆಚ್ಚು ಸಿಹಿತಿಂಡಿಗಳು ಮತ್ತು ಸಕ್ಕರೆ ಸೇವನೆಯಿಂದ ಕೂದಲು ಬೇಗನೆ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಸಕ್ಕರೆಯ ಅತಿಯಾದ ಸೇವನೆ ನೇರವಾಗಿ ಬಿಳಿ ಕೂದಲ ಸಮಸ್ಯೆಗೆ ಕಾರಣವಾಗದಿದ್ದರೂ, ಅದು ದೇಹದೊಳಗಿನ ಗ್ಲೂಕೋಸ್ ಮಟ್ಟವನ್ನು ಅಸ್ಥಿರಗೊಳಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಏರಿಳಿತ ಹೆಚ್ಚಾಗಿ, ಕೂದಲಿನ ಬೇರುಗಳು ಮತ್ತು ಮೆಲನಿನ್ ಉತ್ಪಾದನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೆಲನಿನ್ ಎಂಬುದು ಕೂದಲಿಗೆ ಕಪ್ಪು ಅಥವಾ ಕಂದು ಬಣ್ಣ ನೀಡುವ ವರ್ಣದ್ರವ್ಯ. ಇದರ ಉತ್ಪಾದನೆ ಕಡಿಮೆಯಾದರೆ, ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.
ಹೆಚ್ಚು ಸಕ್ಕರೆ ಸೇವನೆಯ ಮತ್ತೊಂದು ದುಷ್ಪರಿಣಾಮವೆಂದರೆ ದೇಹದಲ್ಲಿ ಫ್ರೀ ರಾಡಿಕಲ್ಗಳು (ಅಸ್ಥಿರ ಅಣುಗಳು) ಹೆಚ್ಚಾಗುವುದು. ಇವು ಕೂದಲಿನ ಬೇರುಗಳಿಗೆ ಹಾನಿ ಮಾಡಿ, ಅವುಗಳನ್ನು ದುರ್ಬಲಗೊಳಿಸುತ್ತವೆ. ಒತ್ತಡವೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒತ್ತಡದ ಸಂದರ್ಭದಲ್ಲಿ ದೇಹವು ಹೆಚ್ಚು ಸಿಹಿ ತಿನ್ನಲು ಹಂಬಲಿಸುತ್ತದೆ. ಆ ಸಮಯದಲ್ಲಿ ಸಿಹಿ ತಿಂದರೆ ತಾತ್ಕಾಲಿಕವಾಗಿ ಒತ್ತಡ ಕಡಿಮೆಯಾಗುವಂತೆ ತೋರುತ್ತದೆ, ಆದರೆ ದೀರ್ಘಾವಧಿಯಲ್ಲಿ ಇದು ಹಾರ್ಮೋನುಗಳನ್ನು ಅಸಮತೋಲನಗೊಳಿಸಿ ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಇದನ್ನೂ ಓದಿ: ಸರಿಯಾದ ಆರೋಗ್ಯ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?
ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳನ್ನು ನಿಯಂತ್ರಿಸಿ, ಸಮತೋಲಿತ ಆಹಾರ ಸೇವಿಸುವುದು ಅಗತ್ಯ. ಹಣ್ಣುಗಳು, ತರಕಾರಿಗಳು, ಕಾಳುಗಳು, ಬೀಜಗಳು ಹಾಗೂ ಪ್ರೋಟೀನ್ ಸಮೃದ್ಧ ಆಹಾರವನ್ನು ಸೇವಿಸಿದರೆ ಕೂದಲು ಆರೋಗ್ಯವಾಗಿರುತ್ತದೆ. ಕಬ್ಬಿಣ ಮತ್ತು ವಿಟಮಿನ್ B12 ಕೂಡ ಕೂದಲಿಗೆ ಬಹಳ ಮುಖ್ಯ. ಜೊತೆಗೆ, ಯೋಗ ಮತ್ತು ಧ್ಯಾನ ಮಾಡುವುದರಿಂದ ಒತ್ತಡ ನಿಯಂತ್ರಣಕ್ಕೆ ಕಡಿಮೆ ಮಾಡುವುದರೊಂದಿಗೆ ಕೂದಲು ಬಿಳಿಯಾಗುವ ಅಪಾಯ ಕಡಿಮೆಯಾಗುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ದೇಹದ ವಿಷಕಾರಿ ವಸ್ತುಗಳು ಹೊರಬಂದು, ಕೂದಲಿನ ಬೇರುಗಳು ಬಲವಾಗಿರುತ್ತವೆ. ಅದರಂತೆ, ಹೆಚ್ಚು ಸಿಹಿ ತಿಂದು ತಾತ್ಕಾಲಿಕವಾಗಿ ನಾಲಿಗೆಗೆ ರುಚಿ ತೋರಿಸುವುದಕ್ಕಿಂತ, ನಿಯಂತ್ರಿತ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ನಿಮ್ಮ ಕೂದಲು ದೀರ್ಘಕಾಲ ಕಪ್ಪಾಗಿ, ಆರೋಗ್ಯಕರವಾಗಿರುತ್ತದೆ.