)
Kitchen Tips: ಟೊಮೇಟೊ ನಮ್ಮ ಅಡುಗೆಯಲ್ಲಿ ಅತ್ಯಗತ್ಯವಾದ ತರಕಾರಿ. ಮಾರುಕಟ್ಟೆಯಲ್ಲಿ ಇದೆಷ್ಟೆ ದುಬಾರಿಯಾದರೂ ಈ ತರಕಾರಿಯನ್ನು ಎಲ್ಲರೂ ಖರೀದಿಸದೇ ಬಿಡುವುದಿಲ್ಲ. ಏಕೆಂದರೆ ಮನೆಯಲ್ಲಿ ಈ ತರಕಾರಿ ಇಲ್ಲದೆ ಅಡುಗೆ ಪೂರ್ಣವಾಗುವುದಿಲ್ಲ. ಆದರೆ ಮಳೆಗಾಲದಲ್ಲಿ ಟೊಮೇಟೊ ಸೇರಿದಂತೆ ಹಲವು ತರಕಾರಿಗಳು ಬೇಗನೆ ಕೊಳೆಯುತ್ತವೆ. ಟೊಮೆಟೊವನ್ನು ಹೊರಗೆ ನೋಡಿದಾಗ ಕೆಂಪಾಗಿ, ತಾಜಾ ಇರುವಂತೆ ಕಾಣಿಸಿದರೂ ಕೂಡ ಒಳಗೆ ಹುಳುಗಳು ಕಂಡುಬರುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಹಣ ವ್ಯರ್ಥವಾಗುವುದರ ಜೊತೆಗೆ ಆರೋಗ್ಯಕ್ಕೂ ಹಾನಿಯಾಗುತ್ತದೆ.
ಹೊರಗೆ ಕೆಂಪಾಗಿದ್ದರೂ ಒಳಗೆ ಹುಳುಗಳಿರುವ ಟೊಮೇಟೊಗಳನ್ನು ಗುರುತಿಸುವುದು ಹೇಗೆ?
ಟೊಮೇಟೊ ಖರೀದಿಸುವಾಗ ಕೇವಲ ಅದರ ಬಣ್ಣ ಅಥವಾ ಗಾತ್ರವನ್ನಷ್ಟೇ ಪರಿಗಣಿಸಿದರೆ ಸಾಲದು. ಏಕೆಂದರೆ ಟಮೆಟೊವಿನ ಬಣ್ಣ ತುಂಬಾ ಗಾಢ ಕೆಂಪಾಗಿದ್ದರೆ ಅದು ಅತಿಯಾಗಿ ಹಣ್ಣಾಗಿದೆ ಎಂದರ್ಥ. ಇದು ಬೇಗನೆ ಕೊಳೆಯುವ ಸಾಧ್ಯತೆ ಹೆಚ್ಚು. ತುಂಬಾ ದೊಡ್ಡ ಟೊಮೆಟೊಗಳು ಒಳಗೆ ಒಣಗಿರಬಹುದು ಅಥವಾ ಬೀಜಹೆಚ್ಚಾಗಿರಬಹುದು. ಹಾಗೆಯೇ ತುಂಬಾ ಗಟ್ಟಿಯಾಗಿರುವ ಟೊಮೇಟೊ ಒಳಗೆ ಇನ್ನೂ ಕಾಯಾಗಿ ಇರಬಹುದು.
ಇನ್ನು ಟೊಮೇಟೊದ ಮೇಲ್ಭಾಗದಲ್ಲಿ ಅಚ್ಚು, ಬಿರುಕುಗಳು ಅಥವಾ ಬಿಳಿ ಪದಾರ್ಥ ಕಂಡುಬಂದರೆ ಅದು ಬಳಸಲು ಯೋಗ್ಯವಾಗಿರುವುದಿಲ್ಲ. ಅಷ್ಟೇ ಅಲ್ಲ ಟೊಮೇಟೊ ಜರೀದಿಸುವಾಗ ಅದರ ವಾಸನೆಯೂ ಸಹ ಮುಖ್ಯ. ಏಕೆಂದರೆ ತಾಜಾ ಟೊಮೆಟೊ ಒಳ್ಳೆಯ ತಾಜಾ ವಾಸನೆಯನ್ನು ಹೊಂದಿರುತ್ತದೆ. ಆದರೆ ಮಧ್ಯದಲ್ಲಿ ಕೆಟ್ಟ ವಾಸನೆ ಇದ್ದರೆ ಅದು ಬೇಗನೆ ಹಾಳಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಒತ್ತಿದಾಗ ರಸ ಹೊರಬಂದು ಅದರಲ್ಲಿ ದುರ್ವಾಸನೆ ಕಂಡುಬಂದರೂ ಅದು ತಾಜಾ ಅಲ್ಲ ಎಂದರ್ಥ. ಇಂತಹ ಟೊಮೇಟೊಗಳಲ್ಲಿ ಹುಳುಗಳೂ ಸಹ ಹೊರಬರುವ ಸಾಧ್ಯತೆ ಇದೆ.
ಮಾರುಕಟ್ಟೆಯಲ್ಲಿ ಟೊಮೇಟೊ ಆರಿಸುವಾಗ ಸೂಕ್ಷ್ಮವಾಗಿ ಗಮನಿಸಿ ಆರಿಸುವುದು ಉತ್ತಮ. ಆನ್ಲೈನ್ನಲ್ಲಿ ಅಥವಾ ರಸ್ತೆ ಬದಿ ವ್ಯಾಪಾರಿಗಳಿಂದ ಖರೀದಿಸುವಾಗ ಇಂತಹ ಸಣ್ಣ ಸಣ್ಣ ಅಂಶಗಳನ್ನು ಗಮನಿಸುವುದು ಕಷ್ಟ. ಆದ್ದರಿಂದ ಮನೆಯ ಅಡುಗೆಯಲ್ಲಿ ಬಳಸುವ ಟೊಮೆಟೊಗಳು ತಾಜಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಆರೋಗ್ಯಕ್ಕೆ ಉತ್ತಮ.
ಇನ್ನು ನೀವೆನಾದರೂ ಒಂದೇ ಬಾರಿ ಹೆಚ್ಚು ಟಮೆಟೊಗಳನ್ನು ಖರೀದಿಸಬೇಕಾದರೆ ಸ್ವಲ್ಪ ಗಟ್ಟಿಯಾಗಿರುವ, ಇನ್ನೂ ಹಸಿರು ಮಿಶ್ರಿತ ಟೊಮೇಟೊಗಳನ್ನು ಆರಿಸುವುದು ಒಳಿತು. ಅವು ಮನೆಯಲ್ಲೂ ದೀರ್ಘಕಾಲ ಉಳಿಯುತ್ತವೆ. ಸಂಪೂರ್ಣವಾಗಿ ಮಾಗಿದ ಟೊಮೆಟೊಗಳನ್ನು ದೀರ್ಘಕಾಲ ಇಟ್ಟರೆ ಬೇಗನೆ ಕೊಳೆಯುತ್ತವೆ. ಆದ್ದರಿಂದ ಅರ್ಧಭಾಗದಷ್ಟು ಹಣ್ಣಾಗಿರುವ ದೊರೆಯುವ ಟೊಮೆಟೊಗಳನ್ನು ಬಳಸಿ.