ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ ಅಂದರೆ ಪೈಲ್ಸ್ ಒಂದು.
ಹೆಮೆರಾಯ್ಡ್ ಅಥವಾ ಮೊಳೆರೋಗ ಎಂತಲೂ ಕರೆಯುವ ಈ ಕಾಯಿಲೆಯ ಹಿಂಸೆ ಅನುಭವಿಸಿದವರಿಗೆ ಮಾತ್ರ ಗೊತ್ತು.
ಪೈಲ್ಸ್ ಇದ್ದವರಿಗೆ ಗುದನಾಳದ ಒಳಪದರದಲ್ಲಿರುವ ರಕ್ತನಾಳಗಳು ಸೋಂಕಿಗೊಳಗಾಗಿ ಉಬ್ಬಿಕೊಂಡು ಮಲವಿಸರ್ಜನೆಯ ವೇಳೆ ಒತ್ತಲ್ಪಟ್ಟು ಬಿರಿದು ರಕ್ತ ಒಸರುತ್ತದೆ.
ಇದಲ್ಲದೆ ಗುದದ್ವಾರದಲ್ಲಿ ಚರ್ಮದ ನೋವಿನ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದು ಮಲವಿಸರ್ಜನೆ ಮಾಡುವಾಗ ನೋವನ್ನು ಉಂಟುಮಾಡುತ್ತದೆ.
ಕೆಲವರಿಗೆ ಗುದದ್ವಾರದಲ್ಲಿ ಸ್ವಲ್ಪ ಹೊರಗಡೆ ಭಾಗದಲ್ಲಿ ಪೈಲ್ಸ್ ಉಂಟಾದರೆ ಇತರರಿಗೆ ಗುದದ್ವಾರದ ಒಳಗೆ ಪೈಲ್ಸ್ ಸಮಸ್ಯೆ (ಫಿಸ್ಟುಲಾ) ಕಂಡುಬರುತ್ತದೆ.
ಆರೋಗ್ಯ ತಜ್ಞರ ಪ್ರಕಾರ ಮೂಲವ್ಯಾಧಿಗೆ ಬಹು ಮುಖ್ಯ ಕಾರಣವೆಂದರೆ ಮಲಬದ್ಧತೆ. ಸಾಮಾನ್ಯವಾಗಿ ಹೆಚ್ಚು ಕಾಲ ಕುಳಿತು ಕೆಲಸ ಮಾಡುವವರಿಗೆ ಈ ಮೂಲವ್ಯಾಧಿ ಕಂಡುಬರುತ್ತದೆ.
ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗದಿರುವ ಜನರಿಗೆ ಈ ಸಮಸ್ಯೆ ಕಾಡುತ್ತದೆ. ಇದರಿಂದ ಕೆಲವೊಮ್ಮೆ ಕುಳಿತುಕೊಳ್ಳಲು ಮತ್ತು ಮಲಗಲು ಕಷ್ಟವಾಗುತ್ತದೆ.
ಅನುವಂಶಿಕ ಕಾರಣಗಳಿಂದ ಹಿಡಿದು ಮಲಬದ್ಧತೆ, ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಜೀವನಶೈಲಿ ಮುಂತಾದವುಗಳಿಂದ ಮೂಲವ್ಯಾಧಿ ಎದುರಾಗಬಹುದು.