Causes of rabies: ರೇಬಿಸ್ ಒಂದು ಅಪಾಯಕಾರಿ ರೋಗವಾಗಿದ್ದು, ಇದರಿಂದ ಮನುಷ್ಯರ ಸಾವಿನ ತೀವ್ರತೆ ಹೆಚ್ಚಿದೆ. ಆದ್ದರಿಂದ ಇದರ ಕುರಿತು ತಿಳಿದುಕೊಳ್ಳುವುದು ಮುಖ್ಯ..

rabies: ರೇಬೀಸ್ ಎಂಬುದು ನಾಯಿ, ಬೆಕ್ಕು ಅಥವಾ ಮಂಗ ಕಡಿತದಿಂದ ಮನುಷ್ಯರಿಗೆ ಬರುವ ಅತ್ಯಂತ ಅಪಾಯಕಾರಿ ಕಾಯಿಲೆ. ವೈದ್ಯಕೀಯ ಜಗತ್ತಿನಲ್ಲಿ ಇದನ್ನು “ಜಗತ್ತಿನ ಅತ್ಯಂತ ಮಾರಕ ರೋಗ” ಎಂದು ಪರಿಗಣಿಸಲಾಗಿದೆ. ಒಂದು ಬಾರಿ ರೇಬೀಸ್ ತಗುಲಿದರೆ ಅದನ್ನು ಗುಣಪಡಿಸುವ ಚಿಕಿತ್ಸೆಯೇ ಇಲ್ಲ. ಇಂದಿನವರೆಗೂ ವಿಶ್ವದಲ್ಲಿ ಕೇವಲ 6 ಜನರು ಮಾತ್ರ ಈ ಕಾಯಿಲೆಯಿಂದ ಪಾರಾಗಿದ್ದಾರೆ. ಉಳಿದವರಿಗೆ ಸಾವು ಶೇಕಡಾ 100ರಷ್ಟು ಖಚಿತ. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ – ಈ ರೋಗವನ್ನು ತಡೆಗಟ್ಟಬಹುದು, ಆದರೆ ಅದರ ಲಕ್ಷಣಗಳು ಕಾಣಿಸಿಕೊಂಡ ನಂತರ ಚಿಕಿತ್ಸೆ ಅಸಾಧ್ಯ.
ರೇಬೀಸ್ ಸೋಂಕಿನ ಲಕ್ಷಣಗಳು
ರೇಬೀಸ್ ಬಂದ ವ್ಯಕ್ತಿಯ ಸ್ಥಿತಿ ತುಂಬಾ ಭಯಾನಕವಾಗಿರುತ್ತದೆ. ಸೋಂಕು ತಗುಲಿದವರು ಸಾಮಾನ್ಯವಾಗಿ ಇರಲು ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ರೋಗಿಗೆ ನೀರಿನ ಭಯ (Hydrophobia) ಉಂಟಾಗುತ್ತದೆ – ಬಾಯಾರಿಕೆ ಇದ್ದರೂ, ನೀರು ಕುಡಿಯಲಾಗುವುದಿಲ್ಲ. ಕುಟುಂಬ ಸದಸ್ಯರೂ ಸಹ ಅವರನ್ನು ಗುರುತಿಸಲು ಕಷ್ಟವಾಗುತ್ತದೆ. ರೋಗಿಯ ಬಾಯಿಂದ ನೊರೆ ಬರುತ್ತದೆ, ಕೆಲವೊಮ್ಮೆ ಹುಚ್ಚು ನಾಯಿಯಂತೆ ಬೊಗಳುವಂತಹ ವರ್ತನೆ ತೋರಿಸುತ್ತಾರೆ. ಜ್ವರ, ಗಂಟಲು ನೋವು, ಅಸಹನೆ, ಪಾರ್ಶ್ವವಾಯು ಮುಂತಾದ ತೀವ್ರ ತೊಂದರೆಗಳು ಕಾಣಿಸುತ್ತವೆ.
ಭಾರತದಲ್ಲಿ ರೇಬೀಸ್ ಸ್ಥಿತಿ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ಪ್ರತಿ ವರ್ಷ ಸುಮಾರು 5726 ಜನರು ರೇಬೀಸ್ನಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 18,000-20,000 ಜನರು ರೇಬೀಸ್ನಿಂದ ಸಾಯುತ್ತಿದ್ದಾರೆ ಎಂಬ ಅಚ್ಚರಿಯ ವಿಷಯ ತಿಳಿದು ಬಂದಿದೆ. ಇದು ವಿಶ್ವದ ಒಟ್ಟು ರೇಬೀಸ್ ಸಾವುಗಳಲ್ಲಿ 36% ಭಾರತದಲ್ಲೇ ಸಂಭವಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಮಕ್ಕಳೂ, ಯುವಕರೂ ಈ ಸಾವಿನ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ.
ರೇಬೀಸ್ಗೆ ಕಾರಣವಾದ ವೈರಸ್
ಈ ರೋಗಕ್ಕೆ ಲೈಸಾವೈರಸ್ (Lyssavirus) ಕಾರಣವಾಗುತ್ತದೆ. ಇದು ರಾಬ್ಡೋವಿರಿಡೆ (Rhabdoviridae) ಗುಂಪಿಗೆ ಸೇರಿದ್ದು, ದೇಹದ ಅತ್ಯಂತ ಪ್ರಮುಖ ಅಂಗಗಳಾದ ಮೆದುಳು ಮತ್ತು ನರಮಂಡಲವನ್ನು ಗುರಿಯಾಗಿಸುತ್ತದೆ. ಪ್ರಾಣಿ ಕಚ್ಚಿದಾಗ, ಈ ವೈರಸ್ ನರಸ್ನಾಯುಗಳ ಮೂಲಕ ಮೆದುಳಿಗೆ ತಲುಪುತ್ತದೆ. ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಮೀರಿಸುತ್ತದೆ. ಪರಿಣಾಮವಾಗಿ ಮೆದುಳಿನ ಕೋಶಗಳನ್ನು ನಾಶಮಾಡುತ್ತಾ, ದೇಹದ ಎಲ್ಲಾ ಕಾರ್ಯಗಳನ್ನು ನಿಲ್ಲಿಸುತ್ತದೆ.
ಈ ರೋಗಕ್ಕೆ ಚಿಕಿತ್ಸೆ ಏಕೆ ಇಲ್ಲ?
ರೇಬೀಸ್ಗೆ ಇಲ್ಲಿಯವರೆಗೂ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ. ರೋಗದ ಲಕ್ಷಣಗಳು ಶುರುವಾದ ಬಳಿಕ ಜೀವ ಉಳಿಸುವುದು ಅಸಾಧ್ಯ. ತಜ್ಞರು ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದರೂ, ವೈರಸ್ನ ಬಲವಾದ ರಕ್ಷಣಾ ಗೋಡೆಯನ್ನು ಭೇದಿಸಲು ಯಾವುದೇ ಔಷಧಿ ಯಶಸ್ವಿಯಾಗಿಲ್ಲ. ಆದ್ದರಿಂದ ರೇಬೀಸ್ಗೆ ಏಕೈಕ ಪರಿಹಾರ ತಡೆಗಟ್ಟುವಿಕೆ. ಪ್ರಾಣಿ ಕಚ್ಚಿದ ತಕ್ಷಣವೇ ತಡವಿಲ್ಲದೆ ಹತ್ತಿರದ ಆಸ್ಪತ್ರೆಗೆ ಹೋಗಿ ರೇಬೀಸ್ ವಿರೋಧಿ ಲಸಿಕೆ (PEP) ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ಗಾಯ ಚಿಕ್ಕದಾಗಿರಲಿ, ದೊಡ್ಡದಾಗಿರಲಿ – ಲಸಿಕೆ ಪಡೆಯದೆ ನಿರ್ಲಕ್ಷ್ಯ ಮಾಡಿದರೆ ಇದ ಜೀವಕ್ಕೆ ಅಪಾಯಕಾರಿಯಾಗುತ್ತದೆ. ಲಸಿಕೆ ಸೋಂಕಿನ ಮುಂಚೆಯೇ ಅಥವಾ ತಕ್ಷಣದ ಬಳಿಕ ಮಾತ್ರ ಪರಿಣಾಮಕಾರಿ. ಒಮ್ಮೆ ಲಕ್ಷಣಗಳು ಶುರುವಾದರೆ, ಯಾವುದೇ ಔಷಧಿಯೂ ರೋಗಿಯನ್ನು ಉಳಿಸಲು ಸಾಧ್ಯವಿಲ್ಲ.
ಮುನ್ನೆಚ್ಚರಿಕೆಯ ಸಲಹೆಗಳು
ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಕನಿಷ್ಠ 15 ನಿಮಿಷಗಳು ಸಾಬೂನು ನೀರಿನಿಂದ ತೊಳೆಯಬೇಕು.
ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಲಸಿಕೆ ಪಡೆಯಬೇಕು.
ಬೀದಿ ನಾಯಿಗಳಿಗೆ ಹತ್ತಿರ ಹೋಗುವುದನ್ನು ತಪ್ಪಿಸಬೇಕು.
ಪೋಷಣೆ ಮಾಡುತ್ತಿರುವ ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು.