)
Karnataka Rain: ಕಳೆದ ಒಂದು ವಾರದಿಂದ ಹುಬ್ಬಳ್ಳಿ ಧಾರವಾಡ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರಂತರ ಮಳೆ ಆಗುತ್ತಿದೆ. ಅದೇ ರೀತಿ ಇಂದು ಬೆಳ್ಳಂ ಬೆಳಗ್ಗೆ ವರುಣನ ಆರ್ಭಟ ಹೆಚ್ಚಾಗಿದ್ದು, ಜನರು ಹೊರಗೆ ಬರದಂತಾಗಿದೆ. ಹೌದು ಇಂದು ಎಲ್ಲ ಕಡೆಗೂ ಹೆಚ್ಚಿನ ಮಳೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದೇ ರೀತಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕೂಡ ಇಂದು ಧಾರವಾಡ ಜಿಲ್ಲಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆಯಿಂದ ಆರಂಭವಾದ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಜನ ಜೀವನಕ್ಕೆ ಅಸ್ತವ್ಯಸ್ತತೆ ಆಗಿದೆ. ಜನರು ಮನೆ ಬಿಟ್ಟು ಹೊರಗೆ ಬರದಂತಾಗಿದೆ. ಈ ಮಳೆ ಇನ್ನೂ ಎರಡ್ಮೂರು ದಿನಗಳ ವರೆಗೆ ಇದೇ ರೀತಿ ಎಂದು ಮೂಲ ಮಾಹಿತಿಯಿಂದ ತಿಳಿದು ಬಂದಿದೆ.
ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿಯೇ 519% ಮಳೆಯ ಪ್ರಮಾಣ ಹೆಚ್ಚಾಗಿದೆ, ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.
ಮಳೆ ಹಾಗೂ ಬೆಳೆ ಹಾನಿಯ ಕುರಿತು ಮಾತನಾಡಿದ ಡಿಸಿ ದಿವ್ಯಪ್ರಭು ಅವರು, ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿಯೇ 519% ರಷ್ಟು ಮಳೆ ಹೆಚ್ಚಾಗಿದೆ. ಆಗಸ್ಟ್ 01ರಿಂದ ಇಲ್ಲಿಯವರೆಗೆ ಪ್ರತಿಶತ 67% ಮಳೆಯ ಪ್ರಮಾಣ ಹೆಚ್ಚಾಗಿದೆ ಎಂದರು.
ಮಳೆಯಿಂದ ಮನೆಗಳಿಗೆ ಹಾನಿ:
ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 96 ಮನೆಗಳು ಹಾನಿಗೆ ಒಳಗಾಗಿವೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಲ್ಲದೆ ಯಾವುದೇ ಜಾನುವಾರುಗಳ ಕೂಡ ಪ್ರಾಣ ಹಾನಿಗೆ ಬಲಿಯಾಗಿಲ್ಲ ಎಂದವರು ತಿಳಿಸಿದರು.
ಬೆಳೆ ಹಾನಿ ವರದಿಗೆ ಸೂಚನೆ:
ಇನ್ನೂ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾನಿಯ ಬಗ್ಗೆ ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದರು.