)
ಧಾರವಾಡ: ಹುಬ್ಬಳ್ಳಿಯ ಎ.ಬಿ. ಏಜನ್ಸಿಯ ಮಾಲೀಕ ಅಜಯ್ ಶಾಹ್ ಅವರು ನೋಯ್ಡಾದ ರಾಯಲ್ ಮೂನ್ ಲೈಟ್ ರೆಸಾರ್ಟ್ನಿಂದ ಮೋಸಕ್ಕೊಳಗಾದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗವು ದೂರುದಾರರ ಪರವಾಗಿ ತೀರ್ಪು ನೀಡಿದೆ.
ರೆಸಾರ್ಟ್ನ ಸದಸ್ಯತ್ವ ರದ್ದುಗೊಳಿಸಿ, ಪಾವತಿಸಿದ ರೂ. 1 ಲಕ್ಷವನ್ನು ಬಡ್ಡಿ ಸಮೇತ ಹಿಂದಿರುಗಿಸಲು ಆದೇಶಿಸಿದ ಆಯೋಗ, ದೂರುದಾರರಿಗೆ ರೂ. 25,000 ಪರಿಹಾರ ಮತ್ತು ರೂ. 10,000 ಪ್ರಕರಣದ ವೆಚ್ಚವನ್ನು ನೀಡುವಂತೆ ಸೂಚಿಸಿದೆ.ಅಜಯ್ ಶಾಹ್ ಅವರು ಜನವರಿ 20, 2025 ರಂದು ರಾಯಲ್ ಮೂನ್ ಲೈಟ್ ರೆಸಾರ್ಟ್ನ 5 ವರ್ಷದ ಸದಸ್ಯತ್ವಕ್ಕಾಗಿ ಕೋಟಕ್ ಮಹೀಂದ್ರ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಮೂಲಕ ರೂ. 1 ಲಕ್ಷ ಪಾವತಿಸಿದ್ದರು.
ಈ ಸದಸ್ಯತ್ವವು ದೂರುದಾರ ಮತ್ತು ಅವರ ಕುಟುಂಬಕ್ಕೆ ಆಯ್ದ ಪ್ರವಾಸೋದ್ಯಮ ಸ್ಥಳಗಳಲ್ಲಿ ವಸತಿ ಸೌಲಭ್ಯ ಒದಗಿಸುವ ಭರವಸೆಯನ್ನು ಒಳಗೊಂಡಿತ್ತು. ಆದರೆ, ಸದಸ್ಯತ್ವ ಪಡೆದ 15 ದಿನಗಳ ಒಳಗೆ ರದ್ದುಗೊಳಿಸುವ ಆಯ್ಕೆ ಇದ್ದರೂ, ರೆಸಾರ್ಟ್ನ ಹಿನ್ನೆಲೆಯನ್ನು ಆನ್ಲೈನ್ನಲ್ಲಿ ಪರಿಶೀಲಿಸಿದಾಗ ಅದು ನಕಲಿ ಸಂಸ್ಥೆಯಾಗಿದ್ದು, ಸಾರ್ವಜನಿಕರಿಂದ ಹಣ ದೋಚುವ ಕೆಲಸದಲ್ಲಿ ತೊಡಗಿದೆ ಎಂಬ ಮಾಹಿತಿ ದೂರುದಾರರಿಗೆ ಲಭಿಸಿತು.ಈ ಕಾರಣದಿಂದ ಜನವರಿ 21, 2025 ರಂದು ಅಜಯ್ ಶಾಹ್ ಅವರು ಸದಸ್ಯತ್ವ ರದ್ದುಗೊಳಿಸಿ, ಪಾವತಿಸಿದ ಹಣವನ್ನು ವಾಪಸ್ ನೀಡುವಂತೆ ರೆಸಾರ್ಟ್ಗೆ ಇ-ಮೇಲ್ ಮೂಲಕ ಕೋರಿದರು.
ಈ ಬಗ್ಗೆ ಕೋಟಕ್ ಮಹೀಂದ್ರ ಬ್ಯಾಂಕ್ಗೂ ಮಾಹಿತಿ ನೀಡಿದ್ದರೂ, ಬ್ಯಾಂಕ್ ದೂರುದಾರರ ಕೋರಿಕೆಯನ್ನು ಪರಿಗಣಿಸದೆ ಇಎಮ್ಐ ಕಂತುಗಳ ವಸೂಲಿಯನ್ನು ಮುಂದುವರಿಸಿತು. ಇದರಿಂದ ತೊಂದರೆಗೊಳಗಾದ ಶಾಹ್, ರೆಸಾರ್ಟ್ ಮತ್ತು ಬ್ಯಾಂಕ್ನಿಂದ ಸೇವಾ ನ್ಯೂನ್ಯತೆ ಎಸಗಲಾಗಿದೆ ಎಂದು ಆರೋಪಿಸಿ, ಫೆಬ್ರವರಿ 05, 2025 ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು.
ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯ ವಿ.ಎ. ಬೋಳಶೆಟ್ಟಿ ಅವರು ದೂರನ್ನು ವಿಚಾರಣೆಗೆ ಒಳಪಡಿಸಿ, ರಾಯಲ್ ಮೂನ್ ಲೈಟ್ ರೆಸಾರ್ಟ್ ಎಂಬ ಸಂಸ್ಥೆಯೇ ಇಲ್ಲದಿರುವುದು ಮತ್ತು ಜಾಲತಾಣವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಹಣ ದೋಚಲಾಗಿದೆ ಎಂಬುದು ರುಜುವಾತಾಗಿದೆ ಎಂದು ತೀರ್ಮಾನಿಸಿದರು. ದೂರುದಾರರ ಸದಸ್ಯತ್ವ ರದ್ದತಿಯ ಕ್ರಮವನ್ನು ಸರಿಯೆಂದು ಒಪ್ಪಿಕೊಂಡ ಆಯೋಗ, ರೆಸಾರ್ಟ್ನಿಂದ ದೂರುದಾರರಿಗೆ ಮೋಸ ಮಾಡಲಾಗಿದೆ ಎಂದು ತೀರ್ಪು ನೀಡಿತು.
ತೀರ್ಪಿನಂತೆ, ರಾಯಲ್ ಮೂನ್ ಲೈಟ್ ರೆಸಾರ್ಟ್ ದೂರುದಾರರ ಸದಸ್ಯತ್ವವನ್ನು ತಕ್ಷಣ ರದ್ದುಗೊಳಿಸಬೇಕು, ಪಾವತಿಸಿದ ರೂ. 1 ಲಕ್ಷವನ್ನು ಬಡ್ಡಿ ಸಮೇತ ಹಿಂದಿರುಗಿಸಬೇಕು, ಜೊತೆಗೆ ತೊಂದರೆಗಾಗಿ ರೂ. 25,000 ಪರಿಹಾರ ಮತ್ತು ರೂ. 10,000 ಪ್ರಕರಣದ ವೆಚ್ಚವನ್ನು ನೀಡಬೇಕು ಎಂದು ಆದೇಶಿಸಲಾಗಿದೆ. ಅಲ್ಲದೆ, ಕ್ರೆಡಿಟ್ ಕಾರ್ಡ್ನ ಕಂತುಗಳನ್ನು ಕೋಟಕ್ ಮಹೀಂದ್ರ ಬ್ಯಾಂಕ್ಗೆ ದೂರುದಾರರು ಸಂದಾಯ ಮಾಡಬೇಕೆಂದು ಸೂಚಿಸಲಾಗಿದೆ.ಈ ತೀರ್ಪು ಆನ್ಲೈನ್ ವಂಚನೆಗಳ ವಿರುದ್ಧ ಗ್ರಾಹಕರ ಹಕ್ಕುಗಳ ರಕ್ಷಣೆಯಲ್ಲಿ ಜಿಲ್ಲಾ ಗ್ರಾಹಕರ ಆಯೋಗದ ಪಾತ್ರವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.