)
ಧಾರವಾಡ: ಹುಬ್ಬಳ್ಳಿಯ ಮಂಟೂರಿನ ನಿವಾಸಿ ಅಮೀನಾ ಬಾಗೆ ಅವರ ಮಗ ದಿವಂಗತ ರಫೀಕ್ ಬಾಗೆ ಅವರ ವಿಮಾ ಕ್ಲೇಮ್ಗೆ ಸಂಬಂಧಿಸಿದಂತೆ ಪಿಎನ್ಬಿ ಮೆಟ್ಲೈಫ್ ಇನ್ಸೂರೆನ್ಸ್ ಕಂಪನಿಯ ಸೇವಾ ನ್ಯೂನತೆಗಾಗಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಕಂಪನಿಗೆ ರೂ.14,11,986 ವಿಮಾ ಮೊತ್ತವನ್ನು 9% ಬಡ್ಡಿಯೊಂದಿಗೆ, ಜೊತೆಗೆ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ವೆಚ್ಚವನ್ನು ಒಂದು ತಿಂಗಳೊಳಗೆ ದೂರುದಾರರಿಗೆ ನೀಡುವಂತೆ ಆದೇಶಿಸಿದೆ.
ಅಮೀನಾ ಬಾಗೆ ಅವರ ಮಗ ರಫೀಕ್ ಬಾಗೆ ಅವರು ಪಿಎನ್ಬಿ ಮೆಟ್ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ರೂ.48,257.05 ಪ್ರೀಮಿಯಂ ಕಟ್ಟಿ ವಿಮಾ ಪಾಲಿಸಿಯನ್ನು ಪಡೆದಿದ್ದರು. ಪಾಲಿಸಿ ಚಾಲ್ತಿಯಲ್ಲಿರುವಾಗಲೇ ರಫೀಕ್ ಅವರು ಮನೆಯಲ್ಲಿ ಮರಣ ಹೊಂದಿದ್ದರು. ಈ ಸಂದರ್ಭದಲ್ಲಿ ಅಮೀನಾ ಬಾಗೆ ಅವರು ವಿಮಾ ಕಂಪನಿಯನ್ನು ಸಂಪರ್ಕಿಸಿ, ಸಂಬಂಧಿತ ದಾಖಲೆಗಳನ್ನು ಸಲ್ಲಿಸಿ ರೂ.14,11,986 ಕ್ಲೇಮ್ ಮೊತ್ತವನ್ನು ಕೇಳಿದ್ದರು. ಆದರೆ, ವಿಮಾ ಕಂಪನಿಯು ರಫೀಕ್ ಅವರು ಪಾಲಿಸಿ ತೆಗೆದುಕೊಳ್ಳುವಾಗ ಲಿವರ್ ಕಾಯಿಲೆಯ ಬಗ್ಗೆ ಮಾಹಿತಿ ನೀಡಿಲ್ಲ ಮತ್ತು ಇತರ ಕಂಪನಿಗಳಲ್ಲಿ ಪಾಲಿಸಿ ಪಡೆಯಲು ಪ್ರಯತ್ನಿಸಿದ್ದಾರೆ ಎಂಬ ಕಾರಣ ನೀಡಿ ಕ್ಲೇಮ್ ನಿರಾಕರಿಸಿತ್ತು.
ಈ ದೂರಿನ ಕುರಿತು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯೆ ವಿಶಾಲಾಕ್ಷಿ ಅ. ಬೋಳಶೆಟ್ಟಿ ಅವರು ಕೂಲಂಕುಷವಾಗಿ ವಿಚಾರಣೆ ನಡೆಸಿದರು. ವಿಮಾ ಕಂಪನಿಯ ತನಿಖಾಧಿಕಾರಿಯು ರಫೀಕ್ ಅವರು ಮದ್ಯವ್ಯಸನಿಯಾಗಿದ್ದರು ಮತ್ತು ಕೀಮ್ಸ್, ಸುಚರಾಯು, ತತ್ವದರ್ಶ, ವಿವೇಕಾನಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ದಾಖಲೆಗಳು ಆಸ್ಪತ್ರೆಗಳಲ್ಲಿ ದೊರೆತಿಲ್ಲ ಹಾಗೂ ಕಂಪನಿಯು ಯಾವುದೇ ಪುರಾವೆಗಳನ್ನು ಸಲ್ಲಿಸಲಿಲ್ಲ.
ಈ ಅಂಶಗಳನ್ನು ಗಮನಿಸಿದ ಆಯೋಗ, ವಿಮಾ ಕಂಪನಿಯು ಸುಳ್ಳು ಕಾರಣಗಳನ್ನು ನೀಡಿ ಕ್ಲೇಮ್ನನ್ನು ನಿರಾಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆಯಾಗಿದೆ ಎಂದು ತೀರ್ಪು ನೀಡಿತು. ಆದ್ದರಿಂದ, ಕಂಪನಿಯು ದೂರುದಾರರಿಗೆ ವಿಮಾ ಮೊತ್ತವನ್ನು 9% ಬಡ್ಡಿಯೊಂದಿಗೆ, ಕ್ಲೇಮ್ ನಿರಾಕರಣೆಯ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಬೇಕು ಎಂದು ಆದೇಶಿಸಿತು. ಜೊತೆಗೆ, ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ವೆಚ್ಚವನ್ನು ನೀಡುವಂತೆ ನಿರ್ದೇಶಿಸಿತು.