)
ಧಾರವಾಡ: ಹುಬ್ಬಳ್ಳಿಯ ಅಕ್ಷಯ ಕಾಲೋನಿಯ ನಿವಾಸಿ ಕುಮಾರಿ ಯಶಸ್ವಿ ನಾಯ್ಕ ಖರೀದಿಸಿದ ದೋಷಯುಕ್ತ ಹೇರ್ ರಿಮೂವಲ್ ಮಷಿನ್ ಪ್ರಕರಣದಲ್ಲಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ERIKKA ಇಂಡಿಯಾ ಕಂಪನಿಗೆ ದಂಡ ವಿಧಿಸಿ, ಪರಿಹಾರ ನೀಡುವಂತೆ ಆದೇಶಿಸಿದೆ.
ಕುಮಾರಿ ಯಶಸ್ವಿ ನಾಯ್ಕ ಅವರು ದಿನಾಂಕ 07.06.2023 ರಂದು ERIKKA ಇಂಡಿಯಾದಿಂದ ರೂ. 8,749 ಮೌಲ್ಯದ ಹೇರ್ ರಿಮೂವಲ್ ಮಷಿನ್ನ್ನು ಯುಪಿಐ ಮೂಲಕ ಖರೀದಿಸಿದ್ದರು. ಒಂದು ವರ್ಷದ ವಾರಂಟಿಯೊಂದಿಗೆ ಖರೀದಿಸಲಾದ ಈ ಮಷಿನ್ ಕೆಲವೇ ತಿಂಗಳುಗಳಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಈ ಬಗ್ಗೆ ಕಂಪನಿಗೆ ದೂರು ನೀಡಿದಾಗ, ಕಂಪನಿಯು ಬೇರೊಂದು ಮಷಿನ್ ಒದಗಿಸಿತು. ಆದರೆ, ಆ ಮಷಿನ್ ಕೂಡ ಕೆಲವೇ ತಿಂಗಳುಗಳಲ್ಲಿ ಕೆಟ್ಟುಹೋಯಿತು. ವಾರಂಟಿ ಅವಧಿಯಲ್ಲಿದ್ದರೂ ಕಂಪನಿಯು ಹೊಸ ಮಷಿನ್ ಒದಗಿಸಲು ಅಥವಾ ದುರಸ್ತಿಗೊಳಿಸಲು ನಿರಾಕರಿಸಿತು.
ಈ ಸೇವಾ ನ್ಯೂನತೆಯಿಂದ ಬೇಸತ್ತ ಯಶಸ್ವಿ ನಾಯ್ಕ, ಗ್ರಾಹಕರ ರಕ್ಷಣಾ ಕಾಯ್ದೆಯಡಿ ಕಂಪನಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ದಿನಾಂಕ 07.03.2025 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು. ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯೆ ವಿಶಾಲಾಕ್ಷಿ ಅ. ಬೋಳಶೆಟ್ಟಿ ಅವರು ದೂರಿನ ಕೂಲಂಕುಷ ವಿಚಾರಣೆ ನಡೆಸಿದರು. ದಾಖಲೆಗಳ ಪರಿಶೀಲನೆಯಿಂದ ದೂರುದಾರರು ಮಷಿನ್ ಖರೀದಿಸಿದ್ದು ದೃಢಪಟ್ಟಿತು.
ಕಂಪನಿಯು ದೋಷಯುಕ್ತ ಮಷಿನ್ಗಳನ್ನು ಒದಗಿಸಿ, ವಾರಂಟಿ ಅವಧಿಯಲ್ಲೂ ಸರಿಪಡಿಸಲು ಅಥವಾ ಬದಲಾಯಿಸಲು ನಿರಾಕರಿಸಿದ್ದು, ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿಯಾಗಿದೆ ಎಂದು ಆಯೋಗ ತೀರ್ಪು ನೀಡಿತು.ತೀರ್ಪಿನಂತೆ, ERIKKA ಇಂಡಿಯಾ ಕಂಪನಿಯು ದೂರುದಾರರಿಗೆ ಖರೀದಿ ಮೊತ್ತ ರೂ. 8,749 ರ ಜೊತೆಗೆ ಶೇ. 8 ರ ಬಡ್ಡಿಯನ್ನು, ಜತೆಗೆ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 25,000 ಪರಿಹಾರವನ್ನು ಹಾಗೂ ರೂ. 5,000 ಪ್ರಕರಣದ ಖರ್ಚನ್ನು ಒದಗಿಸಬೇಕೆಂದು ಆಯೋಗ ಆದೇಶಿಸಿದೆ. ಈ ತೀರ್ಪು ಗ್ರಾಹಕರ ಹಕ್ಕುಗಳ ರಕ್ಷಣೆಗೆ ಆಯೋಗದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.