)
ಹುಬ್ಬಳ್ಳಿ: ಬಸವ ಸಂಸ್ಕೃತಿ ಯಾತ್ರೆಯ ಹೆಸರಿನಲ್ಲಿ ಕೆಲವರು ವೀರಶೈವ-ಲಿಂಗಾಯತ ಸಮಾಜ ಬೇರೆ ಬೇರೆ ಎಂದು ಬಿಂಬಿಸಲು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಹಾಗೂ ವೀರಶೈವ-ಲಿಂಗಾಯತ ಒಂದೇ ಎಂದು ಸಾರುವ ಧ್ಯೇಯದೊಂದಿಗೆ ಹುಬ್ಬಳ್ಳಿಯಲ್ಲಿ ಸೆ. 19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ಆಯೋಜಿಸಲಾಗಿದೆ ಎಂದು ಶಿರಹಟ್ಟಿ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಯಾವುದೇ ಕಾರಣಕ್ಕೂ ಆಗಬಾರದು. ವೀರಶೈವ-ಲಿಂಗಾಯತ ಸಮಾಜ ಒಂದೇ ಎಂಬುದು ನಮ್ಮ ನಿಲುವಾಗಿದೆ. 1904ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ಲಿಂಗಾಯತ-ವೀರಶೈವ ಮಹಾಸಭಾದ ನಿಲುವು ಸಹ ಅದೇ ಆಗಿದೆ. ಈ ನಿಲುವಿಗೆ ಬದ್ಧರಾಗಿರುವ ರಾಜ್ಯದ ನೂರಾರು ವೀರಶೈವ ಲಿಂಗಾಯತ ಮಠಾಧೀಶರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಸಮಾಜದ ಸಚಿವರು, ಶಾಸಕರು, ಮಾಜಿ ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳನ್ನು ಆಹ್ವಾನಿಸಲಿದ್ದೇವೆ ಎಂದರು.
ಕೆಲವರು ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಬಿಂಬಿಸುವ ಮೂಲಕ ಸಮಾಜವನ್ನು ಇಬ್ಭಾಗ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬದಾಮಿ ಶಿವಯೋಗ ಮಂದಿರದಲ್ಲಿ ಶುಕ್ರವಾರ (ಸೆ.5) ಒಂದೇ ನಿಲುವಿನ 200 ಮಠಾಧೀಶರು ಸಭೆ ಸೇರಿ ಸಮಾವೇಶ ನಡೆಸುವ ನಿರ್ಧಾರಕ್ಕೆ ಬಂದಿದ್ದೇವೆ. ಸಮಾವೇಶದ ಸಮಯ (ಬೆಳಗ್ಗೆ 10 ಅಥವಾ ಮಧ್ಯಾಹ್ನ 3ಕ್ಕೆ)ವನ್ನು ಕೆಲ ದಿನಗಳಲ್ಲಿ ನಿರ್ಧರಿಸಲಿದ್ದೇವೆ ಎಂದು ಹೇಳಿದರು.