ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಬೆಳಕಿಗೆ ಬಂದಿದೆ. ಮನೆಯ ಹೊರಗೆ ಆಟವಾಡುತ್ತಿದ್ದಾಗ ಹತ್ತು ರೂಪಾಯಿ ನಾಣ್ಯ ನುಂಗಿದ ಹತ್ತು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಮರುದಿನವೇ ಸಾವನ್ನಪ್ಪಿದ್ದಾಳೆ. ತಮ್ಮ ಶಕ್ತಿ ಮೀರಿ ರಕ್ಷಿಸಿದ ಮಗಳು ತಮ್ಮ ಕಣ್ಣೆದುರೇ ಸಾವನ್ನಪ್ಪಿದ್ದರಿಂದ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ.

Telangana
: ಮನೆಯ ಹೊರಗೆ ಆಟವಾಡುತ್ತಿದ್ದಾಗ ಹತ್ತು ರೂಪಾಯಿ ನಾಣ್ಯ ನುಂಗಿದ ಹತ್ತು ವರ್ಷದ ಬಾಲಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮರುದಿನವೇ ಸಾವನ್ನಪ್ಪಿದ್ದಾಳೆ. ತೆಲಂಗಾಣದ ಯಾದದ್ರಿ ಭುವನಗಿರಿ ಜಿಲ್ಲೆಯ ಭೂದನ್ ಪೋಚಂಪಲ್ಲಿ ಮಂಡಲದ ಭೀಮನಪಲ್ಲಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಭೀಮನಪಲ್ಲಿ ಗ್ರಾಮದ ಶೇಖರ್ ಮತ್ತು ಜ್ಯೋತಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳಿದ್ದಾರೆ. ಈ ಹೆಣ್ಣುಮಗು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿತ್ತು. ಆದರೆ ಗುರುವಾರ ಸಂಜೆ ಆಟವಾಡುತ್ತಿದ್ದಾಗ ಈ ಬಾಲಕಿ ಆಕಸ್ಮಿಕವಾಗಿ ಹತ್ತು ರೂಪಾಯಿ ನಾಣ್ಯವನ್ನ ನುಂಗಿದ್ದಾಳೆ. ವಿಷಯ ತಿಳಿದ ಪೋಷಕರು ತಕ್ಷಣವೇ ಬಾಲಕಿಯನ್ನ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಯನ್ನ ಪರೀಕ್ಷಿಸಿ ಶಸ್ತ್ರಚಿಕಿತ್ಸೆ ಮಾಡಿ ನಾಣ್ಯವನ್ನ ಹೊರತೆಗೆದಿದ್ದರು. ಸ್ವಲ್ಪ ಸಮಯದವರೆಗೆ ಬಾಲಕಿಯನ್ನ ಮೇಲ್ವಿಚಾರಣೆಯಲ್ಲಿ ಇರಿಸಿಕೊಂಡು ನಂತರ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಮರುದಿನ ಬೆಳಗ್ಗೆ ಬಾಲಕಿಯನ್ನ ಎಬ್ಬಿಸಲು ಹೋದ ಪೋಷಕರಿಗೆ ಬಿಗ್ ಶಾಕ್ ಉಂಟಾಗಿದೆ. ಯಾಕೆಂದರೆ ಬಾಲಕಿ ಪ್ರಜ್ಞಾಹೀನಳಾದ ಸ್ಥಿತಿಯಲ್ಲಿದ್ದಳು. ಕೂಡಲೇ ಆಕೆಯನ್ನ ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಬಾಲಕಿಯ ಆರೋಗ್ಯ ಪರೀಕ್ಷಿಸಿ, ಆಕೆ ಮೃತಪಟ್ಟಿದ್ದಾಳೆಂದು ದೃಢಪಡಿಸಿದರು.
ವೈದ್ಯರ ಮಾತು ಕೇಳಿ ಪೋಷಕರು ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದರು. ತಮ್ಮ ಶಕ್ತಿ ಮೀರಿ ರಕ್ಷಿಸಿದ ಮಗಳು ತಮ್ಮ ಕಣ್ಣೆದುರೇ ಸಾವನ್ನಪ್ಪಿದ್ದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಸಾವನ್ನಪ್ಪಿದ್ದಾಳೆಂದು ಪೋಷಕರು ಆರೋಪಿಸಿದ್ದಾರೆ.