ಗಾಜಿಯಾಬಾದ್ ನ ಮೇಣದದೀಪ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ, 7 ಜನರ ದುರ್ಮರಣ, 20 ಕ್ಕೂ ಅಧಿಕ ಜನರಿಗೆ ಗಾಯ
ರಾಷ್ಟ್ರರಾಜಧಾನಿ ದೆಹಲಿಗೆ ಹೊಂದಿಕೊಂಡಂತೆ ಇರುವ ಗಾಜಿಯಾಬಾದ್ ನಲ್ಲಿ ಒಂದು ಭೀಕರ ಘಟನೆ ಸಂಭವಿಸಿದೆ.
ಗಾಜಿಯಾಬಾದ್: ರಾಷ್ಟ್ರರಾಜಧಾನಿ ದೆಹಲಿಗೆ ಹೊಂದಿಕೊಂಡಂತೆ ಇರುವ ಗಾಜಿಯಾಬಾದ್ ನಲ್ಲಿ ಒಂದು ಭೀಕರ ಘಟನೆ ಸಂಭವಿಸಿದೆ. ಇಲ್ಲಿನ ಒಂದು ಮೇಣದ ದೀಪ ತಯಾರಿಸುವ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ನಗರದ ಮೋದಿನಗರದಲ್ಲಿರುವ ಒಂದು ಫ್ಯಾಕ್ಟರಿಯಲ್ಲಿ ಈ ಬ್ಲಾಸ್ಟ್ ಸಂಭವಿಸಿದ್ದು, ಸುಮಾರು 7 ಜನರು ಈ ಬ್ಲಾಸ್ಟ್ ನಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಫ್ಯಾಕ್ಟರಿ ಮೋದಿನಗರ ತಾಲೂಕುಕಿನ ಬರಖವಾ ಗ್ರಾಮದಲ್ಲಿದೆ ಎನ್ನಲಾಗಿದೆ. ಭಾನುವಾರ ಆಕಸ್ಮಿಕವಾಗಿ ಈ ಫ್ಯಾಕ್ಟರಿಯಲ್ಲಿ ಬ್ಲಾಸ್ಟ್ ಸಂಭವಿಸಿದ್ದು, ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸ್ಥಳೀಯರು ಈ ಬ್ಲಾಸ್ಟ್ ಸದ್ದು ದೂರದವರೆಗೆ ಕೇಳಿಬಂದಿದೆ ಎಂದಿದ್ದಾರೆ. ಬ್ಲಾಸ್ಟ್ ಸದ್ದು ಕೇಳಿಬರುತ್ತಲೇ ಅವಸರದಲಿಯೇ ಜನರು ಘಟನೆಯ ಕುರಿತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತಲುಪಿ ತಪಾಸಣೆಯಲ್ಲಿ ತೊಡಗಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಜಿಯಾಬಾದ್ ಡಿಎಂ ಹಾಗೂ ಎಸ್ಎಸ್ಪಿಗೆ ಘಟನಾ ಸ್ಥಳಕ್ಕೆ ತಲುಪಿ ಘಟನೆಯಲ್ಲಿ ಗಾಯಗೊಂಡವರಿಗೆ ತಕ್ಷಣ ನೆರವು ಒದಗಿಸುವಂತೆ ನಿರ್ದೇಶನಗಳನ್ನು ನೀಡಿದ್ದಾರೆ. ಇದರ ಜೊತೆಗೆ ಘಟನೆಯ ಕುರಿತು ತನಿಖೆ ನಡೆಸುವಂತೆಯೂ ಕೂಡ ಆದೇಶಿಸಿದ್ದಾರೆ. ಅಷ್ಟೇ ಅಲ್ಲ ಈ ಇಂದು ಸಂಜೆಯವರೆಗೆ ಈ ಘಟನೆಯ ಕುರಿತಂತೆ ವರದಿ ಸಲ್ಲಿಸುವಂತೆ ಅವರು ಆದೇಶ ನೀಡಿದ್ದಾರೆ.
ಫ್ಯಾಕ್ಟರಿಯಲ್ಲಿ ಬಾಂಬ್ ಬ್ಲಾಸ್ ಗೂ ಮುನ್ನ ಇಂದು ಗಾಜಿಯಾಬಾದ್ ಶಹೀದ್ ನಗರ್ ಪ್ರದೇಶದಲ್ಲಿನ ಒಂದು ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ ಕೂಡ ಸಂಭವಿಸಿದೆ. ಸೂಚನೆಯ ಮೇರೆಗೆ ಅಗ್ನಿಶಾಮಕ ದಳದ ಸುಮಾರು 10 ವಾಹನಗಳು ಘಟನಾ ಸ್ಥಳಕ್ಕೆ ತಲುಪಿ ಹರಸಾಹಸದ ಬಳಿಕ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ರಾನ್ಸ್ಪೋರ್ಟ್ ಕಂಪನಿಗೆ ಸೇರಿದ ಈ ಗೋದಾಮಿನಲ್ಲಿ ಗಾರ್ಮೆಂಟ್ಸ್, ಮಶಿನರಿ, ಶೂಗಳು ಹಾಗೂ ಕೆಮಿಕಲ್ ಗಳನ್ನು ಇಡಲಾಗಿತ್ತು . ಈ ವೇಳೆ 3-4 ಕೆಮಿಕಲ್ ಗಳಿಂದ ತುಂಬಿದ ಡ್ರಮ್ ಗಳು ಕೂಡ ಸ್ಫೋಟಿಸಿವೆ. ಇಂದು ಭಾನುವಾರ ಇರುವ ಕಾರಣ ಗೋದಾಮಿಗೆ ರಜಾ ದಿನ ಇರುತ್ತದೆ. ಹೀಗಾಗಿ ಅಗ್ನಿ ಅಕ್ಕ-ಪಕ್ಕದ ಗೋಡೌನ್ ಗಳಿಗೆ ಪಸರಿಸಿಲ್ಲ. ಎನ್ನಲಾಗಿದೆ.