ನಷ್ಟದ ಹಾದಿಯಲ್ಲಿರುವ ಅಂಬಾನಿ ಕಂಪನಿಗೆ ಭಾರಿ ಹೊಡೆತ
ಕೇವಲ 6 ತಿಂಗಳ ಅವಧಿಯಲ್ಲಿ ಅಂಬಾನಿಯ ಇಬ್ಬರು ಪುತ್ರರು ಕಂಪನಿಯಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನವದೆಹಲಿ: ನಷ್ಟದ ಹಾದಿಯಲ್ಲಿರುವ ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇನ್ಫ್ರಾನಿಂದ ಅವರ ಇಬ್ಬರು ಪುತ್ರರು ರಾಜೀನಾಮೆ ನೀಡಿದ್ದಾರೆ. ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ರಿಲಯನ್ಸ್ ಇನ್ಫ್ರಾ ಕಂಪನಿಯಿಂದ ಅನಿಲ್ ಅಂಬಾನಿ ಅವರ ಇಬ್ಬರು ಪುತ್ರರಾದ ಜಯ್ ಅನ್ಮೋಲ್ ಅಂಬಾನಿ ಹಾಗೂ ಜಯ್ ಅಂಶುಲ್ ಅಂಬಾನಿ ಅವರು ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ಯಾವ ಕಾರಣಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ಕಳೆದ ವರ್ಷವಷ್ಟೇ ಈ ಇಬ್ಬರನ್ನು ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ನಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಆದರೆ, ಕೇವಲ 6 ತಿಂಗಳಲ್ಲಿಯೇ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲಿಸಿದ್ದಾರೆ. ಈ ಕುರಿತು ಬಾಂಬೆ ಸ್ಟಾಕ್ ಎಕ್ಸಚೇಂಜ್ ಗೆ ಪತ್ರ ರವಾಹಿಸಿರುವ ಕಂಪನಿ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದೆ.
ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆಯಲ್ಲಿ ಶೇ.91ರಷ್ಟು ಕುಸಿತ
ಈ ಕುರಿತು ಮಾಹಿತಿ ನೀಡಿರುವ ಮಾರುಕಟ್ಟೆ ತಜ್ಞರು, ಕಳೆದ ಒಂದು ವರ್ಷದಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆಯಲ್ಲಿ ಶೇ.91ರಷ್ಟು ಕುಸಿತ ದಾಖಲಿಸಲಾಗಿದೆ ಎಂದಿದ್ದಾರೆ. ಕಳೆದ ನಾಲ್ಕು ತಿಂಗಳ ಒಳಗೆ BSE ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆಯಲ್ಲಿ ಶೇ.28.5ರಷ್ಟು ಇಳಿಕೆ ಕಂಡುಬಂದಿದೆ. ಡಿಸೆಂಬರ್ 31ರಂದು ಈ ಕುರಿತು ಪತ್ರ ರವಾನಿಸಿರುವ ಕಂಪನಿ ಅನ್ಮೋಲ್ ಹಾಗು ಅಂಶುಲ್ ಇನ್ಮುಂದೆ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಇರುವುದಿಲ್ಲ ಎಂದು ಘೋಷಿಸಿದೆ
28 ವರ್ಷದ ಅನ್ಮೋಲ್ ಹಾಗೂ 24 ವರ್ಷ ವಯಸ್ಸಿನ ಅಂಶುಲ್ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕಂಪನಿಯಲ್ಲಿ ಡೈರೆಕ್ಟರ್ ಆಗಿ ತಮ್ಮ ಸ್ಥಾನ ಅಲಂಕರಿಸಿದ್ದರು. ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ಆಫ್ ಕಂಪನಿಸ್ ನಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ಸ್ , ರಿಲಯನ್ಸ್ ನೇವಲ್ ಅಂಡ್ ಇಂಜಿನೀಯರಿಂಗ್, ರಿಲಯನ್ಸ್ ಇನ್ಫ್ರಾ ಹಾಗೂ ರಿಲಯನ್ಸ್ ಪಾವರ್ ಕಂಪನಿಗಳು ಶಾಮೀಲಾಗಿವೆ. ಇವುಗಳಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ ಕಳೆದ ಹಲವು ಸಮಯಗಳಿಂದ ಸಾಲ ಮರುಪಾವತಿಸಲು ವಿಫಲವಾಗಿದೆ. ರಿಲಯನ್ಸ್ ಇನ್ಫ್ರಾ ಸಾಲ ತೀರಿಸಲು ತನ್ನ ಎಲ್ಲ ಕಂಪನಿಗಳನ್ನು ಮಾರಾಟ ಮಾಡುವ ಪ್ರಯತ್ನದಲ್ಲಿದೆ.