ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗಿಂತ ಅವರ ಮೊಮ್ಮಗನೇ 6 ಪಟ್ಟು ಶ್ರೀಮಂತ!

ದೇವಾಂಶ್‌ನ ಆಸ್ತಿ ಕಳೆದ ವರ್ಷಕಿಂತ 7 ಕೋಟಿ ರೂ. ಏರಿಕೆಯಾಗಿದ್ದು, ಒಟ್ಟು 18.71 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾನೆ. 

Last Updated : Nov 22, 2018, 06:25 PM IST
ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗಿಂತ ಅವರ ಮೊಮ್ಮಗನೇ 6 ಪಟ್ಟು ಶ್ರೀಮಂತ! title=
Pic: PTI

ಅಮರಾವತಿ: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 2.99 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರೆ ಅವರ 3 ವರ್ಷ ವಯಸ್ಸಿನ ಮೊಮ್ಮಗ ನಾನಾ ದೇವಾಂಶ್‌ ಬರೋಬ್ಬರಿ 18.71 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿನಲ್ಲಿ ಹೊಂದಿದ್ದು ತಾತನಿಗಿಂತ ಆರು ಪಟ್ಟು ಹೆಚ್ಚು ಶ್ರೀಮಂತ ಎನಿಸಿಕೊಂಡಿದ್ದಾನೆ.

ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ನಾರಾ ಲೋಕೇಶ್ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕುಟುಂಬದ ಆಸ್ತಿ ವಿವರವನ್ನು ಘೋಷಿಸಿದರು. ಅದರಂತೆ ಲೋಕೇಶ್ ಅವರ ಆಸ್ತಿ ಮೌಲ್ಯ ಈ ವರ್ಷ 21.40 ಕೋಟಿ ರೂ. ಇದ್ದು, ಕಳೆದ ವರ್ಷ 15.21 ಕೋಟಿ ರೂ. ಇತ್ತು.

ಚಂದ್ರಬಾಬು ನಾಯ್ಡು ಅವರ ಆಸ್ತಿ ಕಳೆದ ವರ್ಷಕ್ಕಿಂತ 46 ಲಕ್ಷ ರೂ. ಹೆಚ್ಚಾಗಿದ್ದು, ಕಳೆದ ವರ್ಷವಿದ್ದ ಗೃಹ ಸಾಲ 5.64 ರಿಂದ 5.31 ಕೋಟಿಗೆ ಇಳಿದಿದೆ. ಕಳೆದ ವರ್ಷ ಚಂದ್ರ ಬಾಬು ನಾಯ್ಡು ಅವರು ಹೈದರಾಬಾದಿನ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ನೂತನ ಮನೆಯ ಮೌಲ್ಯ ಕಳೆದ ವರ್ಷ 7.75 ಕೋಟಿ ಇದ್ದರೆ ಈ ವರ್ಷ 8.96 ಕೋಟಿಗೆ ಏರಿಕೆಯಾಗಿದೆ.

ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು ಕುಟುಂಬದಲ್ಲೇ ಅತಿ ಶ್ರೀಮಂತೆ ಎನಿಸಿಕೊಂಡಿದ್ದು, 31.01ಕೋಟಿ ರೂಪಾಯಿ ಆಸ್ತಿ ಅವರ ಹೆಸರಿನಲ್ಲಿದೆ. ಕಳೆದ ವರ್ಷ ಇವರ ಆಸ್ತಿ ಮೌಲ್ಯ 25.41 ಕೋಟಿ ಆಗಿತ್ತು. 

ಇನ್ನು, ಇವರ ಪುತ್ರ ದೇವಾಂಶ್‌ನ ಆಸ್ತಿ ಕಳೆದ ವರ್ಷಕಿಂತ 7 ಕೋಟಿ ರೂ. ಏರಿಕೆಯಾಗಿದ್ದು, ಒಟ್ಟು 18.71 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾನೆ. ಕಳೆದ ವರ್ಷ 11.54 ಕೋಟಿ ರೂಪಾಯಿ ಆಗಿತ್ತು. ಇಲ್ಲಿ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರಿಗಿಂತ, ಅವರ 3 ವರ್ಷದ ಮೊಮ್ಮಗ ದೇವಾಂಶ್‌ನ ಆಸ್ತಿ 6 ಪಟ್ಟು ಹೆಚ್ಚಿರುವುದು ಆಚ್ಚರಿಯ ವಿಚಾರವಾಗಿದೆ.

Trending News