)
Attack On Delhi CM: ಬುಧವಾರ (ಆ.20) ಸಾರ್ವಜನಿಕರ ಭೇಟಿ ಸಮಯದಲ್ಲಿ ವ್ಯಕ್ತಿಯೋರ್ವ ದಿಢೀರನೆ ಬಂದು ದೆಹಲಿ ಸಿಎಂ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 35 ವರ್ಷದ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಇಂದು ಬೆಳಿಗ್ಗೆ ಸಿಎಂ ತಮ್ಮ ಅಧಿಕೃತ ನಿವಾಸ ಸಿವಿಲ್ ಲೈನ್ಸ್ ನಲ್ಲಿ 'ಜನ್ ಸುನ್ವೈ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದ ವ್ಯಕ್ತಿಯೊಬ್ಬ ಜೋರಾಗಿ ಕೂಗುತ್ತಾ ಬಂದು ನಿಂದಿಸುತ್ತಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇದು ಮುಖ್ಯಮಂತ್ರಿ ಅವರ ಭದ್ರತೆಯಲ್ಲಿನ ದೊಡ್ಡ ಲೋಪವೆಂದು ಪರಿಗಣಿಸಲಾಗಿದೆ.
ಏತನ್ಮಧ್ಯೆ, ದೆಹಲಿ ಸಿಎಂ ರೇಖಾ ಗುಪ್ತಾ ಅವರ ಮೇಲಿನ ದಾಳಿಯನ್ನು ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್ದೇವ ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿ ವಾರ ನಡೆಯುವ 'ಜನ್ ಸುನ್ವೈ' ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ದಾಳಿ ಖಂಡನೀಯ ಎಂದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ, ಮುಖ್ಯಮಂತ್ರಿಗಳ ವೈದ್ಯಕೀಯ ಪರೀಕ್ಷೆಗಾಗಿ ವೈದ್ಯರಿಗೆ ಕರೆ ಮಾಡಲಾಗಿದೆ. ತಾವು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳ ಮೇಲೆ ದಾಳಿ ಮಾಡಿದ ದಾಳಿಕೋರ ನ್ಯಾಯಾಲಯದ ಪ್ರಕರಣವನ್ನು ಉಲ್ಲೇಖಿಸುತ್ತಿದ್ದಾನೆ. ಪೊಲೀಸರು ದಾಳಿಕೋರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದವರು ತಿಳಿಸಿದರು.
ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಗೇ ಇಲ್ಲ ರಕ್ಷಣೆ:
ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಕೂಡ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ದಾಳಿಯನ್ನು ಖಂಡಿಸಿದ್ದು, ಇದು ತುಂಬಾ ದುಃಖಕರ ಎಂದಿದ್ದಾರೆ. ಮುಖ್ಯಮಂತ್ರಿಗಳು ಇಡೀ ದೇಹಲಿಯನ್ನು ಮುನ್ನಡಿಸುದ್ದಾರೆ. ಅಂತಹವರಿಗೇ ರಕ್ಷಣೆ ಇಲ್ಲ. ಇಂತಹ ಘಟನೆಗಳನ್ನು ಎಷ್ಟು ಖಂಡಿಸಿದರೂ ಸಾಲದು ಇದು ಮಹಿಳೆಯ್ರ ಸುರಕ್ಷತೆಯ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದೆ. ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಗೇ ರಕ್ಷಣೆ ಇಲ್ಲ. ಮುಖ್ಯಮಂತ್ರಿಗಳೇ ಸುರಕ್ಷಿತವಾಗಿಲ್ಲ ಎಂದಾದರೆ ಜನ ಸಾಮಾನ್ಯರಿಗೆ ರಕ್ಷತೆ ಎಲ್ಲಿದೆ ಎಂದವರು ಪ್ರಶ್ನಿಸಿದ್ದಾರೆ.