)
ನವದೆಹಲಿ: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಅಕ್ಟೋಬರ್ 13, 2024 ರಂದು ನಡೆದ ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕೋಮು ಗಲಭೆಯಲ್ಲಿ ಸಾವನ್ನಪ್ಪಿದ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಅವರ ಕೊಲೆ ಪ್ರಕರಣದ ಆರೋಪಿಗಳಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪವನ್ ಕುಮಾರ್ ಶರ್ಮಾ ಅವರ ನ್ಯಾಯಾಲಯ ಇಂದು ಶಿಕ್ಷೆಯನ್ನು ಪ್ರಕಟಿಸಿದೆ.
ರಾಮ್ ಗೋಪಾಲ್ ಅವರನ್ನು ಹತ್ಯೆಗೈದ ಆರೋಪಿ ಸರ್ಫರಾಜ್ಗೆ ಬಹ್ರೈಚ್ ನ್ಯಾಯಾಲಯ ಮರಣದಂಡನೆ ವಿಧಿಸಿದರೆ. ಇತರ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಡಿಸೆಂಬರ್ 9 ರಂದು ನ್ಯಾಯಾಲಯವು 13 ಆರೋಪಿಗಳಲ್ಲಿ 10 ಜನರನ್ನು ದೋಷಿಗಳು ಎಂದು ಆದೇಶ ನೀಡಿತು, ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೂವರನ್ನು ಖುಲಾಸೆಗೊಳಿಸಿತು.ಶಿಕ್ಷೆಗೊಳಗಾದ ಆರೋಪಿಗಳಲ್ಲಿ ಅಬ್ದುಲ್ ಹಮೀದ್, ಅವರ ಮಗ ಫಹೀಮ್, ಸರ್ಫರಾಜ್, ತಾಲಿಬ್, ಸೈಫ್, ಜಾವೇದ್, ಜೀಶನ್, ನಾನ್ಕೌ, ಶೋಯೆಬ್ ಮತ್ತು ಮಾರುಫ್ ಅವರು ಸೇರಿದ್ದಾರೆ.ಈ ಪೈಕಿ ಸರ್ಫರಾಜ್ಗೆ ಮರಣದಂಡನೆ ವಿಧಿಸಲಾಗಿದೆ. ವಿಚಾರಣೆ ಪೂರ್ಣಗೊಂಡು ಕೇವಲ 13 ತಿಂಗಳು ಮತ್ತು 26 ದಿನಗಳಲ್ಲಿ ತೀರ್ಪು ನೀಡಲಾಗಿದೆ ಎಂದು ಸರ್ಕಾರಿ ವಕೀಲ ಪ್ರಮೋದ್ ಸಿಂಗ್ ಹೇಳಿದ್ದಾರೆ.
ವಿಚಾರಣೆಯ ವೇಳೆ 12 ಸಾಕ್ಷಿಗಳು ಹಾಜರು :
ಈ ಘಟನೆ ಮಹಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾರಾಜ್ಗಂಜ್ನಲ್ಲಿ ನಡೆದಿದ್ದು, ಡಿಜೆ ಹಾಡಿನ ವಿಚಾರವಾಗಿ ವಿವಾದ ಉಂಟಾಗಿತ್ತು.ನಂತರ ನಡೆದ ಹಿಂಸಾಚಾರದಲ್ಲಿ ರಾಮ್ ಗೋಪಾಲ್ ಮಿಶ್ರಾ ಸಾವನ್ನಪ್ಪಿದರು. ಪೊಲೀಸರು ಜನವರಿ 11, 2025 ರಂದು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು ಮತ್ತು ಫೆಬ್ರವರಿ 18 ರಂದು ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಯಿತು. 12 ಸಾಕ್ಷಿಗಳು ಸಾಕ್ಷ್ಯ ನುಡಿದ ನಂತರ ನವೆಂಬರ್ 21 ರಂದು ತೀರ್ಪನ್ನು ಕಾಯ್ದಿರಿಸಲಾಯಿತು.
ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಸೆಕ್ಷನ್ 103(2) (ಗುಂಪು ಹತ್ಯೆಗೆ ಸಂಬಂಧಿಸಿದಂತೆ ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು, ಕೇವಲ ಇದಷ್ಟೇ ಅಲ್ಲದೆ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 191(2), 191(3), 190, 109(2), 249, 61(2), ಮತ್ತು ಸೆಕ್ಷನ್ 30 ಸಹ ದಾಖಲಾಗಿದ್ದವು.
ಡಿಸೆಂಬರ್ 9 ರಂದು ನ್ಯಾಯಾಲಯ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಕ್ಕೆ, ರಾಮ್ ಗೋಪಾಲ್ ಮಿಶ್ರಾ ಅವರ ಪತ್ನಿ ರೋಲಿ ಮಿಶ್ರಾ, "ನನ್ನ ಗಂಡನ ಹಂತಕರನ್ನು ಗಲ್ಲಿಗೇರಿಸಿ, ಆಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ. ಖುಲಾಸೆಗೊಂಡ ಮೂವರು ಸಹ ತಪ್ಪಿತಸ್ಥರು ಮತ್ತು ಅವರಿಗೆ ಶಿಕ್ಷೆಯಾಗಬೇಕು" ಎಂದು ಆಗ್ರಹಿಸಿದ್ದರು. ಖುರ್ಷಿದ್, ಶಕೀಲ್ ಮತ್ತು ಅಫ್ಜಲ್ ಖುಲಾಸೆಗೊಂಡವರು. ಪ್ರಕರಣದಲ್ಲಿ ಎನ್ಎಸ್ಎ ಕೂಡ ವಿಧಿಸಲಾಗಿದೆ.ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಆಡಳಿತವು ಪ್ರದೇಶದಲ್ಲಿ ಭಾರೀ ಪಡೆಗಳನ್ನು ನಿಯೋಜಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.