)
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಆದರೆ ಅದನ್ನು ಸಾಬೀತು ಮಾಡಲು ನಮ್ಮ ಬಳಿ ಸಾಕ್ಷಿ, ಪುರಾವೆಗಳು ಇಲ್ಲ ಎಂದು ಜನ ಸುರಾಜ್ ಪಕ್ಷದ ಸ್ಥಾಪಕ ಹಾಗೂ ಮಾಜಿ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅವರು ಹೇಳಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್ ಅವರು, ತಿಂಗಳುಗಳ ಕಾಲ ಇಡೀ ರಾಜ್ಯಾದ್ಯಾಂತ ದೊಡ್ಡದಾಗಿ ಪ್ರಚಾರ ಮಾಡಲಾಗಿತ್ತು. ಹಲವು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಕೂಡ ಇತ್ತು. ಜನರು ಹೆಚ್ಚಿನ ಮಟ್ಟಿಗೆ ಬೆಂಬಲ ತೋರಿಸಿದ್ದರು. ಪ್ರಚಾರದಲ್ಲಿ ಗುಂಪು ಗುಂಪಾಗಿ ಸಾರ್ವಜನಿಕರು ಸೇರಿದ್ದರು. ಆದರೆ ಮತದಾನ ಮಾಡಿರುವುದು ನಮ್ಮ ಜೊತೆ ಹೊಂದಿಕೆ ಆಗುತ್ತಿಲ್ಲ. ಇದರಿಂದ ಎಲ್ಲೋ ತಪ್ಪು ನಡೆದಿರಬಹುದು ಎಂದು ಹೇಳಿದ್ದಾರೆ.
ಕೆಲವು ಶಕ್ತಿಗಳು ಇದರಲ್ಲಿ ಆಟವಾಡಿವೆ.ಜನರಿಗೆ ಗೊತೇ ಇಲ್ಲದ ಪಕ್ಷಗಳು ಲಕ್ಷಂತಾರ ಮತಗಳನ್ನು ಪಡೆದುಕೊಂಡಿವೆ. ಇವಿಎಂಗಳನ್ನು ತಿರುಚಲಾಗಿದೆ ಅಂತ ನೀವು ಧ್ವನಿ ಎತ್ತಿ ಎಂದು ಜನರು ನನಗೆ ಹೇಳುತ್ತಿದ್ದಾರೆ. ಯಾರೇ ಆಗಲಿ ಸೋತ ನಂತರ ಸಾಮಾನ್ಯವಾಗಿ ಆರೋಪಿಸುವ ವಿಷಯವಾಗಿದೆ. ಆದರೆ ಇವಿಎಂ ಮ್ಯಾನುಪ್ಲೇಟ್ ಮಾಡಲಾಗಿದೆ ಎನ್ನುವುದಕ್ಕೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎನ್ನುವುದಕ್ಕೆ ನನ್ನ ಬಳಿ ಪುರಾವೆಗಳು ಇಲ್ಲ. ಮೇಲ್ನೋಟಕ್ಕೆ ಏನೋ ತಪ್ಪಾಗಿದೆ. ಆದರೆ ಅದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಎನ್ಡಿಎ ಮೇಲೆ ಆರೋಪ ಮಾಡಿದ ಪ್ರಶಾಂತ್ ಕಿಶೋರ್ ಅವರು ಚುನಾವಣೆಗೂ ಮೊದಲು ಬಿಹಾರದ ಎಲ್ಲ ಮಹಿಳೆಯರಿಗೆ ಹಣವನ್ನು ಹಂಚಿಕೆ ಮಾಡಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಮತದಾನದವರೆಗೆ ಪ್ರತಿ ಮಹಿಳೆಯರಿಗೆ ಹತ್ತು ಸಾವಿರ ರೂಪಾಯಿಗಳನ್ನು ಹಂಚಿಕೆ ಮಾಡಿದ್ದಾರೆ. ಇದು ಕೇವಲ ಮುಂಗಡ ಹಣ ಇನ್ನು ಕೊಡಲಾಗುವುದು ಎಂದು ಅಲ್ಲಿನ ಮಹಿಳೆಯರಿಗೆ ಭರವಸೆಯನ್ನು ಎನ್ಡಿಯ ಪಕ್ಷಗಳು ನೀಡಿದ್ದವು ಎಂದು ಆರೋಪಿಸಿದರು.
ಪ್ರಶಾಂತ್ ಕಿಶೋರ್ ಅವರು ಇದೇ ಮೊದಲ ಬಾರಿಗೆ ಜನ ಸುರಾಜ್ ಪಕ್ಷವನ್ನು ಸ್ಥಾಪನೆ ಮಾಡಿ ಬಿಹಾರ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದರು. ಆದರೆ ಸ್ಪರ್ಧಿಸಿದ ಯಾವುದೇ ಕ್ಷೇತ್ರದಲ್ಲಿ ಗೆದ್ದಿಲ್ಲ. ಒಟ್ಟು 243 ಸ್ಥಾನಗಳ ಪೈಕಿ 238 ಕ್ಷೇತ್ರಗಳಲ್ಲಿ ಜನ ಸುರಾಜ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. 236 ಸ್ಥಾನಗಳಲ್ಲಿ ಅಭ್ಯರ್ಥಿಗಳು ಠೇವಣಿ ಕೂಡ ಪಡೆದಿರಲಿಲ್ಲ ಎನ್ನುವುದು ಗಮನಿಸಬೇಕಾದ ಅಂಶ ಆಗಿತ್ತು.