)
ನವದೆಹಲಿ:ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಉಗ್ರರ ಭೀಕರ ಸ್ಫೋಟವು ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ನವೆಂಬರ್ 10, 2025 ರ ಸಂಜೆ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡಿದ್ದರು.
ಈ ಘಟನೆ ಈಗ ಕೇವಲ ಒಬ್ಬ ವ್ಯಕ್ತಿ ಮಾಡಿರುವ ಕೃತ್ಯವಾಗಿರದೇ ಬೃಹತ್ ಭಯೋತ್ಪಾದಕ ಜಾಲದ ಪಿತೂರಿಯಾಗಿದೆ.ತನಿಖಾ ಸಂಸ್ಥೆಗಳು ತನಿಖೆಗೆ ಒಳಪಡಿಸಿದಾಗ ಆಘಾತಕಾರಿ ಸಂಗತಿಗಳು ಹೊರಬಂದಿವೆ.ಭಯೋತ್ಪಾದಕರು ತಮ್ಮ ಸಂಭಾಷಣೆಗಳನ್ನು ಮರೆಮಾಡಲು ತಮ್ಮ ಚಾಟ್ಬಾಕ್ಸ್ಗಳಲ್ಲಿ ಕೋಡ್ ಪದಗಳನ್ನು ಬಳಸಿದ್ದಾರೆ ಎನ್ನುವ ಸ್ಪೋಟಕ ಮಾಹಿತಿ ಈಗ ತನಿಖೆ ಮೂಲಕ ತಿಳಿದು ಬಂದಿದೆ.ಹಾಗೇ ನೋಡಿದರೆ ಈ ಕೋಡ್ಗಳನ್ನು ನೋಡಿದಾಗ ಅವು ಅನುಮಾನ ಮೂಡಿಸದೇ ಇರಬಹುದು.ಆದರೆ ಈ ಪದಗಳೇ ಈಗ ಉಗ್ರರ ಸಂಚಿನ ಯೋಜನೆಯ ಭಾಗವಾಗಿವೆ.
ಈ ಚಾಟ್ ನಲ್ಲಿ ಹಬ್ಬಕ್ಕೆ ಬಿರ್ಯಾನಿ ಸಿದ್ದವಾಗಿದೆ ಸರಳ ಪಾರ್ಟಿಗೆ ಆಹ್ವಾನ ಎನ್ನುವ ಸಂದೇಶವನ್ನು ಭದ್ರತಾ ಸಂಸ್ಥೆಗಳು ಪತ್ತೆ ಹಚ್ಚಿವೆ.ಇದರಲ್ಲಿ ಭಯೋತ್ಪಾದಕರು ತಮ್ಮ ಸಂಪೂರ್ಣ ಯೋಜನೆಯನ್ನು ಕೋಡ್ ಪದಗಳಲ್ಲಿ ರೂಪಿಸಿದ್ದರು.'ದಾವತ್' ಎಂದರೆ ಸ್ಫೋಟ ಅಥವಾ ದಾಳಿ ಎಂದರ್ಥ, ಆದರೆ 'ಬಿರಿಯಾನಿ' ಎಂದರೆ ಸ್ಫೋಟಕ ವಸ್ತು ಎನ್ನುವುದನ್ನು ಸೂಚ್ಯವಾಗಿ ಬಿಂಬಿಸುತ್ತವೆ.ಸೈಬರ್ ಕಣ್ಗಾವಲು ತಪ್ಪಿಸಲು ಈ ತಂತ್ರವನ್ನು ಬಳಸಲಾಗಿದೆ. ತನಿಖಾ ವರದಿಯ ಪ್ರಕಾರ, ಇದನ್ನು ಶಾಹೀನ್ ಕಳುಹಿಸಿದ್ದಾರೆ.NIA ಯ ಡಿಜಿಟಲ್ ಫೋರೆನ್ಸಿಕ್ ತನಿಖೆಯಿಂದ ಇದು ಬಹಿರಂಗವಾಗಿದೆ.
ಕೆಂಪು ಕೋಟೆ ಸ್ಫೋಟವು ಸಂಘಟಿತ ಮಾಡ್ಯೂಲ್ನ ಕೆಲಸ ಎಂದು ತನಿಖೆಯು ಸ್ಪಷ್ಟವಾಗಿ ತೋರಿಸುತ್ತದೆ.ಜೈಶ್-ಎ-ಮೊಹಮ್ಮದ್ನಂತಹ ಪಾಕಿಸ್ತಾನ ಮೂಲದ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯಿದೆ.NIA ಪ್ರಕರಣವನ್ನು ವಹಿಸಿಕೊಂಡಿದೆ. ಸೈಬರ್ ಸೆಲ್ ಚಾಟ್ನ ಉಳಿದ ಸದಸ್ಯರನ್ನು ಪತ್ತೆಹಚ್ಚುತ್ತಿದೆ.ದೆಹಲಿ ಪೊಲೀಸರು ಹರಿಯಾಣ, ಉತ್ತರ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಹಲವಾರು ಶಂಕಿತರನ್ನು ಬಂಧಿಸಿದ್ದಾರೆ. ದೆಹಲಿಯಾದ್ಯಂತ ಭದ್ರತೆ ತೀವ್ರಗೊಳಿಸಲಾಗಿದೆ.ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.