ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿಶ್ವಾಸ

ಕಳೆದ ಐದು ವರ್ಷಗಳ ಅಧಿಕಾರವಧಿಯಲ್ಲಿ ಇದೇ ಮೊದಲಬಾರಿಗೆ ಪ್ರಧಾನಿ ಮೋದಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.  

Last Updated : May 17, 2019, 06:38 PM IST
ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ವಿಶ್ವಾಸ

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತದೊಂದಿಗೆ ಕೇಂದ್ರದಲ್ಲಿ ಎರಡನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸಲಿದೆ. ಮತ್ತೆ ಕಮಲ ಅರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. 

ಲೋಕಸಭಾ ಚುನಾವಣೆಯ ಕಡೆಯ ಹಂತದ ಮತದಾನಕ್ಕೆ ಕೇವಲ ಒಂದು ದಿನ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಮುನ್ನ, ದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪ್ರಧಾನಿ ಮೋದಿ-ಅಮಿತ್ ಶಾ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಕಳೆದ ಐದು ವರ್ಷಗಳ ಅಧಿಕಾರವಧಿಯಲ್ಲಿ ಇದೇ ಮೊದಲಬಾರಿಗೆ ಪ್ರಧಾನಿ ಮೋದಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

"ದೇಶದಲ್ಲಿ ಸಮರ್ಥ ಸರ್ಕಾರವಿದೆ. ಇಲ್ಲಿ, ರಂಜಾನ್, ಐಪಿಎಲ್ ಮತ್ತು ಲೋಕಸಭಾ ಚುನಾವಣೆ ಎಲ್ಲವೂ ಒಟ್ಟಿಗೇ ಶಾಂತಿಯುತವಾಗಿ ನಡೆಯುತ್ತಿವೆ. ಇದನ್ನು ನಾನು ಸಾಧನೆ ಎಂದು ಹೇಳುವುದಿಲ್ಲ. ನಾವು ಜಗತ್ತಿಗೆ ಹೆಮ್ಮೆಯಿಂದ ಹೇಳಬಹುದಾದ ಕೆಲವು ವಿಚಾರಗಳನ್ನು ನಾನು ನಂಬುತ್ತೇನೆ. ಪ್ರಜಾಪ್ರಭುತ್ವದ ಶಕ್ತಿ ದೊಡ್ಡದು. ಪ್ರಜಾಪ್ರಭುತ್ವವನ್ನು ಇಟ್ಟುಕೊಂಡು ಪ್ರಪಂಚಕ್ಕೆ ನಮ್ಮ ಪ್ರಭಾವ ಏನು ಎಂಬುದನ್ನು ತೋರಿಸಬೇಕಾಗಿದೆ. ಇದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನನ್ನಲ್ಲಿದೆ" ಎಂದು ಮೋದಿ ಹೇಳಿದರು.

ಇದೇ ವೇಳೆ, ಕಳೆದ ಐದು ವರ್ಷಗಳಲ್ಲಿ ತಮಗೆ ದೇಶದ ಸಂಪೂರ್ಣ ಸಹಕಾರ ದೊರೆತಿದೆ. ದೇಶಸೇವೆ ಮಾಡಲು ಅವಕಾಶ ದೊರೆತಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದ ಪ್ರಧಾನಿ ಮೋದಿ ದೇಶ ಮುನ್ನಡೆಸುವಲ್ಲಿ ಮಾಧ್ಯಮಗಳೂ ಕೂಡ ತಮಗೆ ಸಹಕಾರ ನೀಡಿದ್ದು, ಇದಕ್ಕಾಗಿ ನಾನು ಮಾಧ್ಯಮ ಲೋಕಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದರು.

2014ರ ಚುನಾವಣೆ ವೇಳೆ ಐಪಿಎಲ್​ ಮ್ಯಾಚ್​ಗಳು ರದ್ದಾಗಿದ್ದವು. ಆದರೀಗ ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿದೆ. ಇದಕ್ಕೆ ಕಾರಣ ದೇಶದಲ್ಲಿ ಸಮರ್ಥ ಸರ್ಕಾರವಿದೆ. 2014ರ ಚುನಾವಣೆ ವೇಳೆ ಮೇ 16ರಂದು ಫಲಿತಾಂಶ ಪ್ರಕಟವಾಗಿತ್ತು. ಮೇ 17ರಂದು ಹಲವರಿಗೆ ಆಘಾತವಾಗಿತ್ತು. ಇಂದೂ ಸಹ ಮೇ 17. ಕಾಂಗ್ರೆಸ್ ಗೆಲ್ಲಲಿದೆ ಎಂದು ಬೆಟ್ಟಿಂಗ್ ಕಟ್ಟುತ್ತಿದ್ದವರಿಗೆ ಕಳೆದ ಮೇ 17ರಂದು ತೀವ್ರ ಆಘಾತವಾಗಿತ್ತು. ಅಂತೆಯೇ ಈ ಬಾರಿಯೂ ಸಹ ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ಮೋದಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಒಂದೂವರೆ ವರ್ಷದಲ್ಲಿ 80 ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಮತಾ ಬ್ಯಾನರ್ಜಿ ಏನು ಹೇಳುತ್ತಾರೆ? ಇದಕ್ಕೆ ನಾವೇ ಜವಾಬ್ದಾರರಾಗಿದ್ದರೆ ಬೇರೆಲ್ಲೂ ಹಿಂಸಾಚಾರ ಏಕೆ ನಡೆಯಲಿಲ್ಲ ಎಂದು ಪ್ರಶ್ನಿಸಿದರು. 

ಇದೇ ವೇಳೆ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅಮಿತ್ ಶಾ,  ಒಡಿಷಾ ಮತ್ತು ಮಹಾರಾಷ್ಟ್ರದಲ್ಲಿಯೂ ಹೆಚ್ಚು ಸ್ಥಾನಗಳನ್ನು ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

More Stories

Trending News