2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿಯ ಬಿರುಗಾಳಿಗೆ ಮಹಾಘಟಬಂಧನ್ ಮೈತ್ರಿಕೂಟ ತತ್ತರಿಸಿದೆ ಹೋಗಿದೆ.ಇದೆ ವೇಳೆ ಅಚ್ಚರಿಯ ಸಂಗತಿ ಎಂದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಬಿಜೆಪಿಗಿಂತಲೂ ಕಡಿಮೆ ಸ್ಥಾನ ಪಡೆದಿರುವುದು ಈಗ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಒಂದೆಡೆ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಿದ್ದರೂ ಸಹಿತ ಈಗ ಬಿಜೆಪಿ ಗಳಿಸಿರುವ ಸೀಟುಗಳು ರಾಜಕೀಯ ಚಿತ್ರಣವನ್ನು ಬದಲಿಸಲಿವೆ ಎನ್ನಲಾಗುತ್ತಿದೆ.
ನಿತೀಶ್ ಕುಮಾರ್ ಬೆಂಬಲ ಇಲ್ಲದೆ ಬಿಹಾರದಲ್ಲಿ ಸರ್ಕಾರ ರಚಿಸುತ್ತಾ ಬಿಜೆಪಿ..?
ಈಗ ಬಿಜೆಪಿ ಸಖ್ಯದಲ್ಲಿರುವ ಚಿರಾಗ್ ಪಾಸ್ವಾನ್, ಉಪೇಂದ್ರ ಕುಶ್ವಾಹ ಮತ್ತು ಜಿತನ್ ರಾಮ್ ಮಾಂಝಿ ಅವರ ಬೆಂಬಲದ ಮೂಲಕ ಸಿಎಂ ಸ್ಥಾನಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ನೇಮಕ ಮಾಡುವ ಕುರಿತಾಗಿ ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.ಆದರೆ ಬಿಜೆಪಿ ಆ ಪ್ರಯತ್ನಕ್ಕೆ ಕೈ ಹಾಕಿದಲ್ಲಿ ಅದರ ಪರಿಣಾಮಗಳು ಕೇಂದ್ರ ಸರ್ಕಾರದ ಮೇಲೆಯೂ ಬೀರುತ್ತವೆ ಎನ್ನಲಾಗುತ್ತಿದೆ.
ಹೌದು, ಏಕೆಂದರೆ ಜೆಡಿಯು ಇಲ್ಲದೆ ಸರ್ಕಾರ ರಚಿಸುವುದು ನಿಜಕ್ಕೂ ಅಷ್ಟೂ ಸುಲಭದ ಸಂಗತಿಯಲ್ಲ, ಲೋಕಸಭೆಯಲ್ಲಿ ಜೆಡಿಯು 12 ಸಂಸದರನ್ನು ಹೊಂದಿದ್ದು, ಹಾಗಾಗಿ ಬಿಜೆಪಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ನಿರ್ಲಕ್ಷಿಸುವುದು ಅಸಾಧ್ಯದ ಸಂಗತಿ. ಈಗ ಹಿಂದೂಸ್ತಾನಿ ಅವಾಮ್ ಮೋರ್ಚಾ 5 ಸ್ಥಾನಗಳಲ್ಲಿ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇವುಗಳನ್ನು ಸೇರಿಸಿದರೆ, ಬಿಜೆಪಿ, ಎಲ್‌ಜೆಪಿ, ಆರ್‌ಎಲ್‌ಎಂ ಮತ್ತು ಎಚ್‌ಎಎಂ ನೆರವಿನೊಂದಿಗೆ ಸರ್ಕಾರ ರಚಿಸುವ ಸಾಧ್ಯತೆ ಇದೆ.
ಇನ್ನೂ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಜೆಡಿಯು ಬಿಜೆಪಿಯೊಂದಿಗೆ ಮಾತ್ರ ಮಾತುಕತೆ ನಡೆಸಿತ್ತು, ಆದರೆ ಬಿಜೆಪಿ ರಾಮ್ ವಿಲಾಸ್‌ನ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ), ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದಂತಹ ಇತರ ಮಿತ್ರಪಕ್ಷಗಳೊಂದಿಗೂ ಸಹ ಮಾತುಕತೆ ನಡೆಸುವ ಮೂಲಕ ಚುನಾವಣೆ ಕಣಕ್ಕೆ ಇಳಿದಿತ್ತು. ಈ ಎಲ್ಲಾ ಮಿತ್ರಪಕ್ಷಗಳನ್ನು ಬಿಜೆಪಿ ಎನ್‌ಡಿಎ ಸಖ್ಯಕ್ಕೆ ತಂದಿರುವುದರಿಂದ ಅದರೊಂದಿಗೆ ಮಾತುಕತೆ ನಡೆಸಬೇಕು ಎಂದು ಜೆಡಿಯು ವಾದಿಸಿತ್ತು. ಹೀಗಾಗಿ, ಬಿಹಾರದಲ್ಲಿ ಈ ಪಕ್ಷಗಳು ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಹತ್ತಿರವಾಗಿವೆ.
ವಾಸ್ತವವಾಗಿ, 2024 ರ ಲೋಕಸಭಾ ಚುನಾವಣೆಯಲ್ಲಿ, ನಿತೀಶ್ ಕುಮಾರ್ ಬಳಿ 12 ಸಂಸದರ ಕೀಲಿಕೈ ಇದ್ದು, ಅದನ್ನು ಅವರು ಬಯಸಿದಾಗಲೆಲ್ಲಾ ಬಳಸಬಹುದು.ನಿತೀಶ್ ಕುಮಾರ್ ಇಲ್ಲದೆ ಬಿಜೆಪಿ ಬಿಹಾರದಲ್ಲಿ ಸರ್ಕಾರ ರಚಿಸಿದರೆ, ಅದು ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೆ ಬೆದರಿಕೆಯನ್ನು ಹಾಕಬಹುದು, ಏಕೆಂದರೆ ನಿತೀಶ್ ಕುಮಾರ್ 12 ಸಂಸದರ ಬೆಂಬಲವನ್ನು ಹಿಂತೆಗೆದುಕೊಳ್ಳಬಹುದು. ಇದು ಸರ್ಕಾರದ ಪತನಕ್ಕೆ ಬೆದರಿಕೆ ಹಾಕದಿದ್ದರೂ, ಚಂದ್ರಬಾಬು ನಾಯ್ಡು ಅವರ ಜೊತೆ ಹೆಚ್ಚಿನ ಚೌಕಾಸಿ ಮಾಡಬೇಕಾಗುತ್ತದೆ.ಇದರಿಂದ ಮೋದಿ ಸರ್ಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.
ಇನ್ನೂ ನಿತೀಶ್ ಕುಮಾರ್ ತಮ್ಮ ವಯಸ್ಸಿನ ಕಾರಣದಿಂದಾಗಿ ಮುಂದಿನ ಚುನಾವಣೆಯವರೆಗೂ ರಾಜಕೀಯವಾಗಿ ಸಕ್ರಿಯರಾಗಿ ಉಳಿಯುವ ಸಾಧ್ಯತೆ ಕಡಿಮೆ, ಹಾಗಾಗಿ ಒಂದು ವೇಳೆ ಅವರು ರಾಜಕೀಯದಿಂದ ದೂರ ಸರಿದರೆ ಆಗ ಬಿಜೆಪಿ ಸುಲಭವಾಗಿ ಜೆಡಿಯುನ ಮತ ಬ್ಯಾಂಕ್ ಬೆಂಬಲವನ್ನು ಪಡೆಯಬಹುದು, ಇದರಿಂದಾಗಿ ಸದ್ಯದ ಮಟ್ಟಿಗೆ ಅದು ನಿತೀಶ್ ಕುಮಾರ್ ಬೆಂಬಲ ಇಲ್ಲದೆ ಸರ್ಕಾರ ರಚಿಸುವ ಪ್ರಯತ್ನಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.









