ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ

ಪ್ರಸ್ತುತ, ಕೇಂದ್ರ ನೌಕರರು 9 ಪ್ರತಿಶತದಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ.

Updated: Feb 20, 2019 , 08:05 AM IST
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ
File Image

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 3 ರಷ್ಟು ಹೆಚ್ಚಳ ಮಾಡಲು ಮಂಗಳವಾರ  ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ತುಟ್ಟಿಭತ್ಯೆ ಶೇ 9ರಿಂದ ಶೇ.12ಕ್ಕೆ ಏರಿಕೆಯಾಗಿದ್ದು, ಜನವರಿ 1, 2019ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಇದು ಕೇಂದ್ರ ಸರಕಾರದ 1.1 ದಶಲಕ್ಷ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಪ್ರಯೋಜನವನ್ನು ನೀಡುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇಕಡ 3 ರಷ್ಟು  ಹೆಚ್ಚಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಹಾಲಿ ಶೇ. 9 ತುಟ್ಟಿಭತ್ಯೆ ಇದ್ದು, ಪ್ರಸ್ತುತ ಶೇ. 3ರಷ್ಟು ತುಟ್ಟಿಭತ್ಯೆ ಹೆಚ್ಚಿಸಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಶೇ.12 ತುಟ್ಟಿಭತ್ಯೆ ಸಿಗಲಿದೆ ಎಂದು ತಿಳಿಸಿದರು.

ಏಳನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸಚಿವ ಸಂಪುಟ ತುಟ್ಟಿ ಭತ್ಯೆ ಹೆಚ್ಚಳಕ್ಕೆ ತೀರ್ಮಾನ ಕೈಗೊಂಡಿದ್ದು, ತುಟ್ಟಿಭತ್ಯೆ ಹೆಚ್ಚಳದಿಂದಾಗಿ 48.41 ಲಕ್ಷ ಉದ್ಯೋಗಿಗಳು ಹಾಗೂ 62.03 ಲಕ್ಷ ಪಿಂಚಣಿದಾರರು ಒಳಗೊಂಡಂತೆ ಒಟ್ಟು  1.1 ಕೋಟಿ ಕೇಂದ್ರ ನೌಕರರಿಗೆ  ಅನುಕೂಲವಾಗಲಿದೆ.