ಉತ್ತರಾಖಂಡದ ಉತ್ತರಕಾಶಿಯಲ್ಲಿ ವಿನಾಶಕಾರಿ ಮೇಘಸ್ಫೋಟ ಸಂಭವಿಸಿದೆ. ಭಾರೀ ಮೇಘಸ್ಫೋಟದಿಂದ ಪರ್ವತ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಹಲವು ಮನೆಗಳು ಕೊಚ್ಚಿ ಹೋಗಿರುವುದಾಗಿ ವರದಿಯಾಗಿದೆ.

Uttarakashi Cloudburst: ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಧರಾಲಿ ಗ್ರಾಮ ನೈಸರ್ಗಿಕ ವಿಕೋಪಕ್ಕೆ ಸಿಲುಕಿದ್ದು ಇಂದು (ಆ.05) ಇಲ್ಲಿನ ಖೀರ್ ಗಂಗಾ ಗ್ರಾಮದಲ್ಲಿ ಭಾರೀ ಮೇಘಸ್ಫೋಟದಿಂದ ವಿನಾಶವೇ ಸೃಷ್ಟಿಯಾಗಿದೆ. ಉತ್ತರಕಾಶಿಯ ಪರ್ವತ ಪ್ರದೇಶಗಳಲ್ಲಿ ಭಾರೀ ಮಳೆ ಪ್ರವಾಹದಿಂದಾಗಿ ಹಲವು ಮನೆಗಳು ನಾಶವಾಗಿದ್ದು, ಗಂಗೋತ್ರಿ ಧಾಮ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.
ಪ್ರವಾಹಕ್ಕೆ ಕೊಚ್ಚಿಹೋದ ಮನೆಗಳು:
ಉತ್ತರಕಾಶಿಯ ಧರಾಲಿ ಗ್ರಾಮದ ಬಳಿಯಿರುವ ಖೀರ್ ಗಡ್ ಪ್ರದೇಶದಲ್ಲಿ ಪ್ರವಾಹದಿಂದಾಗಿ ಹಠಾತ್ ನೀರಿನ ಹರಿವು ಹೆಚ್ಚಾದ ಪರಿಣಾಮ ಅಲ್ಲಿನ ಮನೆಗಳು, ಅಂಗಡಿಗಳು, ಮಾರುಕಟ್ಟೆಗಳೆಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ ಎಂದು ವರದಿಯಾಗಿದೆ. ಕೆಲವರು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆದರೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.
ಮೇಘಸ್ಫೋಟ, ಭಾರೀ ಮಳೆ ಪ್ರವಾಹ ಪರಿಸ್ಥಿತಿಯಿಂದಾಗಿ ಮನೆಗಳು ನಾಶವಾಗಿರುವುದರಿಂದ ಬಹುತೇಕ ಜನರು ಅವಶೇಷಗಳಡಿ ಸಿಲುಕಿದ್ದಾರೆ. ಇಲ್ಲಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ಬಣ್ಣಿಸಿದ್ದು, ಎನ್ಡಿಆರ್ಎಫ್, ಸೇನೆ, ಪೊಲೀಸ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.
ಮೇಘಸ್ಫೋಟದ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್:
ಧರಾಲಿ (ಉತ್ತರಕಾಶಿ)ಯಲ್ಲಿ ಸಂಭವಿಸಿರುವ ಮೇಘಸ್ಫೋಟದಿಂದ ಭಾರೀ ಹಾನಿ ಉಂಟಾಗಿರುವ ಸುದ್ದಿ ತುಂಬಾ ದುಃಖಕರವಾಗಿದೆ. ಎನ್ಡಿಆರ್ಎಫ್, ಜಿಲ್ಲಾಡಳಿತ ಮತ್ತು ಇತರ ಸಂಬಂಧಿತ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸಮಾರೋಪಾಡಿಯಲ್ಲಿ ತೊಡಗಿಸಿಕೊಂಡಿವೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಎಲ್ಲರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುವೆ ಎಂದು ಮೇಘಸ್ಫೋಟದ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವಿಟರ್ನಲ್ಲಿ ಬರೆದಿದ್ದಾರೆ.
ಇನ್ನೂ ಹರ್ಷಿಲ್ ಪ್ರದೇಶದ ಖೀರ್ ಗಡ್ ನಲ್ಲಿ ನೀರಿನ ಮಟ್ಟ ಇನ್ನೂ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಮತ್ತಷ್ಟು ಹಾನಿಯಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ಆಡಳಿತ ಜನರು ನದಿಗಳು, ಚರಂಡಿಗಳ ಬಳಿ ಹೋಗದಂತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿರುವಂತೆ ಮನವಿ ಮಾಡಿದೆ.