)
Tamil Nadu politics: ತಮಿಳು ನಾಡು ರಾಜ್ಯ ರಾಜಕೀಯ ದೇಶದ ಗಮನ ಸೆಳೆಯುತ್ತಿದೆ. ಇತ್ತೀಚಿಗೆ ಎಐಎಡಿಎಂಕೆ (AIADMK) ಸಂಸದ ಧನಪಾಲ್ ನೀಡಿದ ಹೇಳಿಕೆ ವಿಜಯ್ ಸರ್ಕಾರಕ್ಕೆ ಬುಡವನ್ನು ಅಲುಗಾಡುವಂತೆ ಮಾಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ಮುಂದಿನ 6 ತಿಂಗಳೊಳಗೆ ಪತನಗೊಳ್ಳುವುದು ಖಚಿತ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಹೌದು.. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರು ಮೇ 19 ರಂದು ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ತುರ್ತು ಸಭೆ ಕರೆದಿದ್ದರು. ಈ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಧನಪಾಲ್, ರಾಜ್ಯ ಸರ್ಕಾರ ಹಾಗೂ ಎಸ್ಪಿ ವೇಲುಮಣಿ ಬಣದ ವಿರುದ್ಧ ವಾಗ್ದಾಳಿ ನಡೆಸಿದರು.
25 ಶಾಸಕರ ಅನರ್ಹತೆ ಕಾನೂನುಬದ್ಧವಾಗಿ ಖಚಿತ : ವಿಶ್ವಾಸಮತ ಯಾಚನೆಯ ವೇಳೆ ಮುಖ್ಯಮಂತ್ರಿ ವಿಜಯ್ ಸರ್ಕಾರದ ಪರವಾಗಿ ಮತ ಚಲಾಯಿಸಿದ ಎಸ್ಪಿ ವೇಲುಮಣಿ ಬಣದ 25 ಶಾಸಕರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ಧನಪಾಲ್ ಸ್ಪಷ್ಟಪಡಿಸಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆಯ (Anti-Defection Law) ಕಠಿಣ ನಿಯಮಗಳಿಂದ ಬಚಾವಾಗಲು ಯಾವುದೇ ಒಂದು ಬಣಕ್ಕೆ ಕನಿಷ್ಠ 2/3ರಷ್ಟು ಬಹುಮತ ಇರಬೇಕಾಗುತ್ತದೆ. ಆದರೆ, ಬಂಡಾಯ ಎದ್ದಿರುವ ವೇಲುಮಣಿ ಬಣಕ್ಕೆ ಅಂತಹ ಯಾವುದೇ ಸಂಖ್ಯಾಬಲದ ಬೆಂಬಲವಿಲ್ಲ. ಹಾಗಾಗಿ, ವಿಪ್ ಉಲ್ಲಂಘಿಸಿ ಸರ್ಕಾರದ ಪರ ಮತ ಹಾಕಿದ ಆ 25 ಶಾಸಕರು ಶೀಘ್ರದಲ್ಲೇ ಅನರ್ಹಗೊಳ್ಳುವುದು ಕಾನೂನು ಬದ್ಧವಾಗಿ ನೂರಕ್ಕೆ ನೂರರಷ್ಟು ಖಚಿತ. ಸ್ಪೀಕರ್ ಶೀಘ್ರದಲ್ಲೇ ಇವರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಧನಪಾಲ್ ತಿಳಿಸಿದರು.
ಎಐಎಡಿಎಂಕೆಯಲ್ಲಿ ಸೃಷ್ಟಿಯಾಗಿರುವ ಬಿರುಕಿನ ನಡುವೆಯೂ ಪಕ್ಷದ ಮೇಲೆ ಎಡಪ್ಪಾಡಿ ಪಳನಿಸ್ವಾಮಿ ಅವರ ಹಿಡಿತ ಸಡಿಲವಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಇಂದಿನ ಸಭೆ ಸಾಕ್ಷಿಯಾಯಿತು. ಸಭೆಯಲ್ಲಿ ಒಟ್ಟು 80 ಜಿಲ್ಲಾ ಕಾರ್ಯದರ್ಶಿಗಳು ಭಾಗವಹಿಸಿ ಇಪಿಎಸ್ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ ಬಂಡಾಯವೆದ್ದಿರುವ ಎಸ್ಪಿ ವೇಲುಮಣಿ ಮತ್ತು ಸಿ.ವಿ. ಷಣ್ಮುಗಂ ಅವರ ಬೆಂಬಲಿಗರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ತ್ವರಿತವಾಗಿ ತೆಗೆದುಹಾಕಲಾಗುವುದು ಎಂದು ಧನಪಾಲ್ ಮಾಹಿತಿ ನೀಡಿದರು.
6 ತಿಂಗಳಲ್ಲಿ ಪತನಗೊಳ್ಳಲಿದೆಯೇ ವಿಜಯ್ ಸರ್ಕಾರ? : ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರಕ್ಕೆ ಸ್ವಂತ ಬಲದ ಬಹುಮತವಿಲ್ಲ. ಕಾಂಗ್ರೆಸ್, ಕಮ್ಯುನಿಸ್ಟ್, ಮುಸ್ಲಿಂ ಲೀಗ್ ಸೇರಿದಂತೆ ವಿವಿಧ ಸಮ್ಮಿಶ್ರ ಪಕ್ಷಗಳ ಹೊರಗಿನ ಬೆಂಬಲದ ಮೇಲೆ ಈ ಸರ್ಕಾರ ನಿಂತಿದೆ. ಆದರೆ ಪ್ರಸ್ತುತ ಈ ಮೈತ್ರಿಕೂಟದೊಳಗೆ ಭಾರಿ ಬಿರುಕು ಮೂಡಿದೆ ಎಂದು ಧನಪಾಲ್ ಆತಂಕಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಟಿವಿಕೆ ಸರ್ಕಾರದ ಸದ್ಯದ ಆಡಳಿತ ವೈಖರಿ ಮತ್ತು ಚಟುವಟಿಕೆಗಳಿಂದ ಮೈತ್ರಿ ಪಕ್ಷಗಳು ಅಸಮಾಧಾನಗೊಂಡಿವೆ. ಒಂದೆಡೆ ಸಮ್ಮಿಶ್ರ ಪಕ್ಷಗಳು ಬೆಂಬಲ ಹಿಂತೆಗೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರವನ್ನು ರಕ್ಷಿಸಲು ಹೋದ ಎಐಎಡಿಎಂಕೆಯ 25 ಶಾಸಕರು ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ.
ಸ್ಪೀಕರ್ ಅಂಗಳದಲ್ಲಿ ವಿಪ್ ಸಮರ : ಪ್ರಸ್ತುತ ಇಡೀ ವಿಧಾನಸಭೆಯ ಗಮನ ಸ್ಪೀಕರ್ ಜೆ.ಸಿ.ಟಿ. ಪ್ರಭಾಕರ್ ಅವರ ನಿರ್ಧಾರದತ್ತ ನೆಟ್ಟಿದೆ. ಇಪಿಎಸ್ ಬಣದ 22 ಶಾಸಕರು ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ, ವೇಲುಮಣಿ ಬಣದ 25 ಶಾಸಕರು ಪರವಾಗಿ ಮತ ಚಲಾಯಿಸಿದ್ದಾರೆ. ಯಾರ ವಿಪ್ ಅಧಿಕೃತ ಎಂಬ ಕಾನೂನು ಸಮರ ತಾರಕಕ್ಕೇರಿದ್ದು, ಎರಡೂ ಬಣಗಳು ಸ್ಪೀಕರ್ ಅವರಿಗೆ ಅರ್ಜಿ ಸಲ್ಲಿಸಿವೆ. ಒಟ್ಟಿನಲ್ಲಿ, ಈ 25 ಶಾಸಕರ ರಾಜಕೀಯ ಭವಿಷ್ಯ ಮತ್ತು ವಿಜಯ್ ಸರ್ಕಾರದ ಅಸ್ತಿತ್ವ ಈಗ ಸಂಪೂರ್ಣವಾಗಿ ಸ್ಪೀಕರ್ ನಿರ್ಧಾರದ ಮೇಲೆ ನಿಂತಿದೆ..