ಶ್ರೀನಗರ: ಲೋಕಸಭಾ ಚುನಾವಣೆಗೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್​ ಮತ್ತು ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದಾಗಿ ಬುಧವಾರ ಘೋಷಿಸಿವೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾತನಾಡಿರುವ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಅಧ್ಯಕ್ಷರಾಗಿರುವ ಫಾರೂಕ್​ ಅಬ್ದುಲ್ಲಾ, ಜಮ್ಮು ಮತ್ತು ಉದಾಂಪುರ್​ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸ್ಪರ್ಧಿಸಲಿದೆ, ತಾನು ಶ್ರೀನಗರ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ. ಅನಂತ್​ನಾಗ್​ ಮತ್ತು ಬಾರಾಮುಲ್ಲಾ ಕ್ಷೇತ್ರಗಳಿಗೆ ಕಾಂಗ್ರೆಸ್​ ಹಾಗೂ ನ್ಯಾಷನಲ್​ ಕಾನ್ಫರೆನ್ಸ್​ ನಡುವೆ ಸ್ನೇಹಾತ್ಮಕ ಸ್ಪರ್ಧೆ ನಡೆಯಲಿದೆ. ಲಡಾಕ್​ ಕ್ಷೇತ್ರದ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ತಿಳಿಸಿದ್ದಾರೆ.


ಮೈತ್ರಿ ಬಗ್ಗೆ ಕಾಂಗ್ರೆಸ್​ ನಾಯಕ ಗುಲಾಂ ನಬಿ ಅಜಾದ್ ಮಾತನಾಡಿ ಸ್ನೇಹಾತ್ಮಕ ಸ್ಪರ್ಧೆ ಅಂದರೆ,​ ಅನಂತ್​ನಾಗ್​ ಹಾಗೂ ಬಾರಮುಲ್ಲಾ ಕ್ಷೇತ್ರಗಳಲ್ಲಿ ಯಾವುದೇ ವಾಕ್ಸಮರವಿಲ್ಲದೆ ಕಾಂಗ್ರೆಸ್​ ಹಾಗೂ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷ ಸೌಹಾರ್ದಯುತವಾಗಿ ಸ್ಪರ್ಧಿಸಲಿವೆ. ಯಾರೇ ಗೆದ್ದರೂ ಅದು ಮೈತ್ರಿಕೂಟದ ಗೆಲುವೇ ಆಗಿರಲಿದೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ಹಾಗೂ ಪಾಕಿಸ್ತಾನದಿಂದ ಬೆದರಿಕೆ ಎದುರಿಸುತ್ತಿರುವ ಜಮ್ಮು ಮತ್ತು ಕಾಶ್ಮೀರದ ಜಾತ್ಯತೀತ ಶಕ್ತಿಗಳನ್ನು ಬಲಗೊಳಿಸುವುದಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.


ಲೋಕಸಭಾ ಚುನಾವಣೆ ಏಪ್ರಿಲ್​ 11 ರಿಂದ ಮೇ 19ರವರೆಗೆ 7 ಹಂತಗಳಲ್ಲಿ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ. ಜಮ್ಮು ಮತ್ತು ಕಾಶ್ಮೀರದ ಆರು ಲೋಕಸಭಾ ಕ್ಷೇತ್ರಗಳಿಗೆ 5 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್​ 11 ರಿಂದ ಆರಂಭವಾಗಿ ಮೇ 6ರಂದು ಚುನಾವಣೆ ಮುಗಿಯಲಿದೆ.


ಬಾರಾಮುಲ್ಲಾ ಮತ್ತು ಜಮ್ಮು ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಶ್ರೀನಗರ ಮತ್ತು ಉಧಮ್ಪುರ ಕ್ಷೇತ್ರಗಳು ಎರಡನೇ ಹಂತದ ಚುನಾವಣೆಗೆ ಹೋಗುತ್ತದೆ. ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿನ ಅನಿಶ್ಚಿತ ಭದ್ರತಾ ಪರಿಸ್ಥಿತಿಯಿಂದಾಗಿ ಅನಂತನಾಗ್ ಕ್ಷೇತ್ರದಲ್ಲಿ ಮೂರನೇ, ನಾಲ್ಕನೇ ಮತ್ತು ಐದನೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಲಡಾಖ್ ಕ್ಷೇತ್ರವು ಐದನೇ ಹಂತದಲ್ಲಿ ಚುನಾವಣೆಗೆ ಹೋಗುತ್ತದೆ.