ನಾಳಿದ್ದು ಚೀನಾದಿಂದ ಚೆನ್ನೈಗೆ ಬರಲಿರುವ ಕರೋನಾ ಟೆಸ್ಟ್ ಕಿಟ್

ತಮಿಳುನಾಡಿನಲ್ಲಿ ಈಗಾಗಲೇ 11 ಸರ್ಕಾರಿ ಮತ್ತು 6 ಖಾಸಗಿ ಸೇರಿದಂತೆ 17 ಪರೀಕ್ಷಾ ಸೌಲಭ್ಯಗಳಿದ್ದು, ಇನ್ನೂ 21 ಪರೀಕ್ಷಾ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. 

Updated: Apr 7, 2020 , 03:48 PM IST
ನಾಳಿದ್ದು ಚೀನಾದಿಂದ ಚೆನ್ನೈಗೆ ಬರಲಿರುವ ಕರೋನಾ ಟೆಸ್ಟ್ ಕಿಟ್

ಚೆನ್ನೈ: ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾದಿಂದ ಒಂದು ಲಕ್ಷ ಕ್ಷಿಪ್ರ ಪರೀಕ್ಷಾ ಕಿಟ್ ಗಳನ್ನು ಖರೀದಿಸಲಾಗಿದೆ, ಅವು ಏಪ್ರಿಲ್ 9ರಂದು ಬರಲಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ತಿಳಿಸಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಚೀನಾದಿಂದ ತರಿಸಲಾಗುತ್ತಿರುವ ಕರೋನಾ ಪರೀಕ್ಷಾ ಕಿಟ್ ಗಳನ್ನು ಎಲ್ಲಾ ಜಿಲ್ಲೆಗಳಿಗೆ ಕಳುಹಿಸಲಾಗುವುದು ಮತ್ತು ಅಗತ್ಯವಿರುವವರಿಗೆ ಪರೀಕ್ಷೆಯನ್ನು ತ್ವರಿತವಾಗಿ ಮಾಡಲಾಗುವುದು. ಒಂದು ಲಕ್ಷ ಪರೀಕ್ಷಾ ಕಿಟ್ ಗಳಿಗೆ ಆದೇಶಿಸಲಾಗಿದೆ ಮತ್ತು ನಾವು ಅದನ್ನು ಚೀನಾದಿಂದ ಪಡೆಯುತ್ತಿದ್ದೇವೆ. ಪರೀಕ್ಷಾ ಕಿಟ್ ಗಳು ಗುರುವಾರ ಬರಲಿದ್ದು, ಮರುದಿನವೇ ಎಲ್ಲಾ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೆ 2,500 ವೆಂಟಿಲೇಟರ್ ಗಳು ಮತ್ತು ಹೆಚ್ಚಿನ ಮಾಸ್ಕ್ ಗಳಿಗೆ ಆದೇಶ ನೀಡಲಾಗಿದೆ ಮತ್ತು ಅವಶ್ಯಕತೆಗಳನ್ನು ಪೂರೈಸಲು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಸಂಗ್ರಹಿಸಲಾಗುತ್ತಿದೆ. ಕೊರೋನಾ ಸೋಂಕು ತಗುಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ವಸ್ತುಗಳು ಸೇರಿದಂತೆ ಔಷಧಗಳು ರಾಜ್ಯದಲ್ಲಿದೆ ಎಂದು ಅವರು ಹೇಳಿದರು.

ತಮಿಳುನಾಡಿನಲ್ಲಿ ಈಗಾಗಲೇ 11 ಸರ್ಕಾರಿ ಮತ್ತು 6 ಖಾಸಗಿ ಸೇರಿದಂತೆ 17 ಪರೀಕ್ಷಾ ಸೌಲಭ್ಯಗಳಿದ್ದು, ಇನ್ನೂ 21 ಪರೀಕ್ಷಾ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ವೈದ್ಯಕೀಯ ಉಪಕರಣಗಳು ಈಗಾಗಲೇ ಬಂದಿವೆ ಮತ್ತು ನಾವು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದ ತಕ್ಷಣ, ಒಟ್ಟು 38 ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಮತ್ತು ವೈರಸ್ ಪರೀಕ್ಷೆಗೆ ಒಳಪಡುವವರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಸಿಎಂ ಹೇಳಿದರು.

ಆರೋಗ್ಯ ಕಾರ್ಯದರ್ಶಿ ಬೀಲಾ ರಾಜೇಶ್ ಅವರು ಭಾನುವಾರ ರಾಜ್ಯದಾದ್ಯಂತ ನಡೆಸುತ್ತಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಹೇಳಿದ್ದಾರೆ.