ನಿಯಂತ್ರಣಕ್ಕೆ ಬಾರದ ಕೊರೊನಾ, ಬುಧವಾರವೂ 5 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ಮೇ 10ರಂದು 4,213  ಪ್ರಕರಣಗಳು ಕಂಡುಬಂದಿದ್ದವು‌. ಅದೇ ದೊಡ್ಡದು ಎಂದುಕೊಳ್ಳುವಷ್ಟರಲ್ಲಿ ಮೇ 17ರಂದು ದಿನ 5,242 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. 

Last Updated : May 21, 2020, 09:36 AM IST
ನಿಯಂತ್ರಣಕ್ಕೆ ಬಾರದ ಕೊರೊನಾ, ಬುಧವಾರವೂ 5 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ title=

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಪರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ಕೋವಿಡ್ -19 (Covid-19) ಅನ್ನು ಕೊನೆಗಾಣಿಸಲು ಭಾರತ ಹಲವಾರು ರೀತಿಯ ಕಸರತ್ತು ನಡೆಸುತ್ತಿದೆ. ಆದರೆ ದಿನದಿಂದ ದಿನಕ್ಕೆ ‌ಕಡಿಮೆ ಆಗಬೇಕಿದ್ದ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ‌. ಕೊರೊನಾ ಸೋಂಕು ಪೀಡಿತರ ಸಂಖ್ಯೆ ಲಕ್ಷವನ್ನೂ ದಾಟಿದೆ. ಅಷ್ಟೇಯಲ್ಲದೆ ಕಳೆದೆರಡು ದಿನದಿಂದ ಪ್ರತಿನಿತ್ಯ 5 ಸಾವಿರಕ್ಕೂ ಹೆಚ್ಚು ಜನರಲ್ಲಿ ‌ಸೋಂಕು ಕಾಣಿಸತೊಡಗಿದೆ.

ಭಾರತ ದಿನೇ‌ದಿನೆ  ಕೊರೊನಾವೈರಸ್ (Coronavirus)  ಹರಡುವಿಕೆ ವಿಷಯದಲ್ಲಿ ಇಂಥ ಕಹಿ ಸುದ್ದಿಗಳನ್ನೇ ಉಣಬಡಿಸುತ್ತಿದೆ. ಈಗಾಗಲೇ ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಿದೆ. ಈಗ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷ ದಾಟಿದೆ. ಈಗ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಮೇ 10ರಂದು 4,213  ಪ್ರಕರಣಗಳು ಕಂಡುಬಂದಿದ್ದವು‌. ಅದೇ ದೊಡ್ಡದು ಎಂದುಕೊಳ್ಳುವಷ್ಟರಲ್ಲಿ ಮೇ 17ರಂದು ದಿನ 5,242 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. 

ಇದಾದ ಬಳಿಕ ಮೇ 18ರಂದು ತುಸು ಕಡಿಮೆ ಆಗಿತ್ತು. 4,159 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಮಂಗಳವಾರ ಒಂದೇ ದಿನ‌ 5,611 ಹೊಸ‌ ಪ್ರಕರಣಗಳು ಪತ್ತೆಯಾಗಿವೆ. ಬುಧವಾರ ಒಂದೇ ದಿನ 5,609 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 1,12,359ಕ್ಕೆ ಏರಿಕೆಯಾಗಿದೆ.

ಅಲ್ಲದೆ ನಿನ್ನೆ ಒಂದೇ ದಿನ ದೇಶದಲ್ಲಿ 132 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 3,435ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳನ್ನು ನೋಡುತ್ತಿದ್ದರೆ ಭಾರತ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ. ಮೇ 6ರಿಂದ ದೇಶದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನವೊಂದರಲ್ಲಿ ಮೂರು ಸಾವಿರ ಮೀರಲು ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಕೆಳಮುಖವಾಗಿಲ್ಲ. ಬೇಕಿದ್ದರೆ ಈ ಅಂಕಿಅಂಶಗಳನ್ನು ನೋಡಿ...

ದಿನಾಂಕವಾರು ಪತ್ತೆಯಾದ ಕೊರೋನಾ ಪ್ರಕರಣಗಳ ಸಂಖ್ಯೆ
ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967,
ಮೇ 15ರಂದು 3,970,
ಮೇ 16ರಂದು 4,987,
ಮೇ 17ರಂದು 5,242,
ಮೇ 18ರಂದು 4,970,
ಮೇ 19ರಂದು 5,611,
ಮೇ 20ರಂದು 5,609.

ಮೇಲಿನ ಅಂಕಿ ಅಂಶಗಳ ಪ್ರಕಾರ ನಿರಂತರವಾಗಿ ಕೊರೊನಾ ವೈರಸ್ ಹರಡುವಿಕೆ ಏರುಮುಖವಾಗಿ ಸಾಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗಲಿದೆ. ಮೇ 16ರಂದು 4,987 ಪ್ರಕರಣಗಳು, ಮೇ 17ರಂದು 5,242 ಪ್ರಕರಣಗಳು, ಮೇ 18ರಂದು 4,159 ಹೊಸ ಪ್ರಕರಣಗಳು, ಮೇ 19ರಂದು 5,611 ಹಾಗೂ ಮೇ 20ರಂದು 5,609 ಪ್ರಕರಣಗಳು ವರದಿಯಾಗಿದ್ದು ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿವೆ.

ಜಾಗತಿಕ ಪಿಡುಗಾಗಿರುವ ಕೊರೋನಾವನ್ನು ನಿಯಂತ್ರಿಸಬೇಕು ಎಂದು ಲಾಕ್ಡೌನ್ ಜಾರಿಗೊಳಿಸಲಾಯಿತು.  ಲಾಕ್​ಡೌನ್ (Lockdown) ನಡುವೆಯೇ ದೇಶದ ಕೊರೋನಾ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಈಗ ಲಾಕ್​ಡೌನ್ ನಿಯಮಾವಳಿಗಳಲ್ಲಿ ಬಹಳಷ್ಟು ಸಡಿಲಿಕೆ ತರಲಾಗಿದೆ. ಹಾಗಾಗಿ ಕೊರೋನಾ ವೈರಸ್ ಹರಡುವಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿವೆ.

Trending News