ನವದೆಹಲಿ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಉಂಟಾದ ಭಾರಿ ಕುಸಿತದಿಂದಾಗಿ ಹೂಡಿಕೆದಾರರ ಸುಮಾರು 5 ಲಕ್ಷ ಕೋಟಿ ರೂ. ಮುಳುಗಿಹೋಗಿವೆ. ಕರೋನಾ ವೈರಸ್ ಹರಡುವಿಕೆಯಿಂದಾಗಿ ಹೆಚ್ಚುತ್ತಿರುವ ಆರ್ಥಿಕ ಅನಿಶ್ಚಿತತೆಯಿಂದಾಗಿ ಈ ಕುಸಿತ ಸಂಭವಿಸಿದೆ. ಬಿಎಸ್‌ಇಯಲ್ಲಿನ 30 ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ 1515.01 ಪಾಯಿಂಟ್ ಅಥವಾ ಶೇ.4.03 ರಷ್ಟು ಕುಸಿದು 36,061.61 ಕ್ಕೆ ತಲುಪಿದೆ. ನಿಫ್ಟಿ ಸಹ 417.05 ಪಾಯಿಂಟ್ ಅಥವಾ ಶೇ.3.80 ಅಂಕಗಳನ್ನು ಕಳೆದುಕೊಂಡು ಸೂಚ್ಯಂಕ 10,572.40 ಕ್ಕೆ ಬಂದು ತಲುಪಿದೆ. ಬಿಎಸ್‌ಇಯಲ್ಲಿ ಪಟ್ಟಿಯಾದ ಕಂಪನಿಗಳ ಮಾರುಕಟ್ಟೆ ಬಂಡವಾಳ ತೀವ್ರವಾಗಿ ಕುಸಿದಿದೆ.


COMMERCIAL BREAK
SCROLL TO CONTINUE READING

ಈಕ್ವಿಟಿ ಮಾರುಕಟ್ಟೆಯಲ್ಲಿನ ಈ ಕುಸಿತದಿಂದಾಗಿ, ಹೂಡಿಕೆದಾರರು 4,79,820.87 ಕೋಟಿ ರೂ. ಕಳೆದುಕೊಂಡಿದ್ದಾರೆ. ಬಿಎಸ್‌ಇಯ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು 1,39,39,640.96 ಕೋಟಿ ರೂ.ಗೆ ಬಂದು ನಿಂತಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಶುಕ್ರವಾರದ ವಹಿವಾಟಿನ ಕೊನೆಯಲ್ಲಿ 1,44,31,224.41 ಕೋಟಿ ರೂ.ಗೆ ತಲುಪಿತ್ತು. ಕರೋನಾ ವೈರಸ್ ಹರಡುವಿಕೆಯಿಂದ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದೆ,  ಷೇರು ಮಾರುಕಟ್ಟೆಗಳಲ್ಲಿ ನಕಾರಾತ್ಮಕ ಪರಿಸ್ಥಿತಿ ಎದುರಾಗಿದೆ ಎಂದು ಬಹುತೇಕ ಹೂಡಿಕೆದಾರರು ಅಭಿಪ್ರಾಯ ಪಟ್ಟಿದ್ದಾರೆ.


ಸೆನ್ಸೆಕ್ಸ್ ನ ಎಲ್ಲಾ ಷೇರುಗಳು ಸದ್ಯ ನಷ್ಟದಲ್ಲಿ ಮುಂದುವೆರೆದಿದ್ದು, ಅವುಗಳಲ್ಲಿ ಒಎನ್‌ಜಿಸಿ, ರಿಲಯನ್ಸ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎಲ್ ಆಂಡ್ ಟಿ, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ಕಂಪನಿಯ ಷೇರುಗಳು ಪ್ರಮುಖವಾಗಿವೆ.


ಕಳೆದ ವಾರ ಬಿಎಸ್‌ಇ 893.00 ಅಂಕಗಳನ್ನು ಮತ್ತು ನಿಫ್ಟಿಯಲ್ಲಿ 279.55 ಅಂಕಗಳನ್ನು ಕಳೆದುಕೊಂಡಿದ್ದವು. ಷೇರು ಮಾರುಕಟ್ಟೆ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು 3,594.84 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 2,543.78 ಕೋಟಿ ರೂ. ವಿಲೇವಾರಿ ಮಾಡಿದ್ದಾರೆ.


ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳ ತೀವ್ರ ಕುಸಿತ ಮತ್ತು ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆದಾರರು ದೇಶೀಯ ಮಾರುಕಟ್ಟೆಯಲ್ಲಿ ಎಚ್ಚರಿಕೆಯ ವಿಧಾನವನ್ನು ಅನುಸರಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ವಿದೇಶಿ ಫಂಡ್ ಗಳು ಮಾರುಕಟ್ಟೆಯಿಂದ ನಿರ್ಗಮಿಸುತ್ತಿರುವ ಕಾರಣ  ಮಾರುಕಟ್ಟೆಯ ಮನೋಭಾವದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಯಸ್ ಬ್ಯಾಂಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಬ್ಯಾಂಕಿಂಗ್ ಕ್ಷೇತ್ರದ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ ಎಂದರು.