)
Cyclone Montha Telangana
: ಮೊಂತಾ ಚಂಡಮಾರುತವು ಭಾರೀ ಪ್ರಮಾಣದಲ್ಲಿ ಎಲ್ಲೆಡೆ ಸದ್ದು ಮಾಡುತ್ತಿದ್ದು, ಇದೀಗ ತೆಲಂಗಾಣದತ್ತ ಮುಖ ಮಾಡಿದೆ. ಆಂಧ್ರಪ್ರದೇಶದ ಕರಾವಳಿಯನ್ನ ದಾಟಿ ತೀವ್ರಗೊಂಡ ಚಂಡಮಾರುತ ಈಗ ದುರ್ಬಲಗೊಂಡು ತೆಲಂಗಾಣದ ಕಡೆಗೆ ಚಲಿಸುತ್ತಿದೆ. ಮೊಂತಾ ಅಬ್ಬರದ ಕಾರಣ ತೆಲಂಗಾಣದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ಇತ್ತೀಚಿನ ವರದಿಗಳ ಪ್ರಕಾರ, ಮೊಂತಾ ಚಂಡಮಾರುತವು ಭದ್ರಾಚಲಂನಿಂದ 50 ಕಿ.ಮೀ ಮತ್ತು ಖಮ್ಮಮ್ನಿಂದ ಸುಮಾರು 110 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಇದು ಮುಂದಿನ ಆರು ಗಂಟೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ಬದಲಾಗುವ ಸಾಧ್ಯತೆಯಿದೆ. ಚಂಡಮಾರುತದ ಪ್ರಭಾವದಿಂದ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಹನುಮಕೊಂಡ, ವಾರಂಗಲ್ ಮತ್ತು ಮಹಬೂಬಾಬಾದ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಆದಿಲಾಬಾದ್, ನಿರ್ಮಲ್, ಮಂಚೇರಿಯಲ್, ಜಗ್ತಿಯಾಲ್ ಮತ್ತು ಕರೀಂನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾದ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಿದ್ದಿಪೇಟೆ, ಸೂರ್ಯಪೇಟೆ, ಭುವನಗಿರಿ, ಭೂಪಾಲಪಲ್ಲಿ ಮತ್ತು ಜನಗಾಂವ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ.
ಚಂಡಮಾರುತದ ಪರಿಣಾಮ ರೈಲು ಸಂಚಾರಕ್ಕೂ ತೊಂದರೆ ಉಂಟಾಗಿದೆ. ದಕ್ಷಿಣ ಮಧ್ಯ ರೈಲ್ವೆಯು ಹಲವಾರು ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಿದೆ. ಕೃಷ್ಣ ಎಕ್ಸ್ಪ್ರೆಸ್ ಮಹಬೂಬಾಬಾದ್ನಲ್ಲಿಯೇ ಹಾಲ್ಟ್ ಆಗಿದ್ದು, ಡೋರ್ನಕಲ್ ನಿಲ್ದಾಣವು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಪರಿಣಾಮ ಗೋಲ್ಕೊಂಡ, ಶಿರಡಿ ರೈಲುಗಳು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಚಂಡಮಾರುತದ ಪರಿಸ್ಥಿತಿಯನ್ನ ಅರಿತು ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಇಲಾಖೆಯ ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡುವಂತೆ ಸಚಿವ ಕೋಮಟಿ ರೆಡ್ಡಿ ವೆಂಕಟರೆಡ್ಡಿ ಸೂಚಿಸಿದ್ದಾರೆ. ಈಗಾಗಲೇ ತುರ್ತು ಕಾರ್ಯಾಚರಣಾ ಕೊಠಡಿಯನ್ನ ಸ್ಥಾಪಿಸಲಾಗಿದೆ. ತಗ್ಗು ಪ್ರದೇಶದಲ್ಲಿರುವ ಜನರು ಎಚ್ಚರದಿಂದ ಇರಬೇಕು, ಯಾವುದೇ ತುರ್ತು ಸಂದರ್ಭ ಬಿಟ್ಟು ಮನೆಗಳಿಂದ ಹೊರಬರಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಾರೀ ಮಳೆಯಿಂದ ಮಾನೇರ್ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಎರಡು ಗೇಟ್ಗಳನ್ನ ತೆರೆಯಲಾಗಿದೆ. ಸುಮಾರು 4,000 ಕ್ಯೂಸೆಕ್ ನೀರನ್ನ ಬಿಡುಗಡೆ ಮಾಡಿಲಾಗಿದೆ. ಅಣೆಕಟ್ಟು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಜನರಿಗೆ ಎಚ್ಚರದಿಂದಿರುವಂತೆ ಸೂಚನೆ ನೀಡಲಾಗಿದೆ. ಸರ್ಕಾರವು ಸಾರ್ವಜನಿಕ ಅಗತ್ಯ ಕ್ರಮಗಳನ್ನ ಕೈಗೊಂಡಿದೆ. ಮುಂದಿನ 24 ಗಂಟೆಗಳಲ್ಲಿ ತೆಲಂಗಾಣದ ಅನೇಕ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಆದಿಲಾಬಾದ್, ನಿಜಾಮಾಬಾದ್, ಜಗ್ತಿಯಾಲ್, ಕಾಮರೆಡ್ಡಿ, ವಾರಂಗಲ್, ಯದಾದ್ರಿ, ಮೇದಕ್ ಜಿಲ್ಲೆಗಳಿಗೆ ವಿಶೇಷ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಮಧ್ಯರಾತ್ರಿ ಆಂಧ್ರಕ್ಕೆ ʻಮೊಂಥಾʼ ಸೈಕ್ಲೋನ್ ಎಂಟ್ರಿ
ಮೊಂತಾ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದರೂ ಅದರ ಪ್ರಭಾವ ಇನ್ನೂ ಮುಂದುವರೆದಿದೆ. ಜನರು ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನಿಯಮಗಳನ್ನ ಪಾಲಿಸಬೇಕು ಎಂದು ಸರ್ಕಾರ ಸಲಹೆ ನೀಡಿದೆ. ಮೊಂತಾ ಚಂಡಮಾರುತದ ಅಬ್ಬರದ ಪರಿಣಾಮ ಕರ್ನಾಟಕ ಮೇಲೂ ಆಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
✍?ಸವಿತಾ ಕಡಕೋಳ