ತಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದಂತೆ ಕಾಂಗ್ರೆಸ್‌ಗೆ ಡ್ಯಾನಿಶ್ ಅಲಿ ಮನವಿ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲೆಂದೇ ಇತ್ತೀಚೆಗೆ ಜೆಡಿಎಸ್ ತೊರೆದು ಬಿಎಸ್​ಪಿ ಸೇರಿದ್ದ ಡ್ಯಾನಿಷ್ ಅಲಿ.

Last Updated : Mar 26, 2019, 09:38 AM IST
ತಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದಂತೆ ಕಾಂಗ್ರೆಸ್‌ಗೆ ಡ್ಯಾನಿಶ್ ಅಲಿ ಮನವಿ  title=
File Image(ANI)

ಲಕ್ನೋ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲೆಂದೇ ಇತ್ತೀಚೆಗೆ ಜೆಡಿಎಸ್ ತೊರೆದು ಬಿಎಸ್​ಪಿ ಸೇರಿದ್ದ ಮಾಜಿ ಪ್ರಧಾನಿ ಹೆಚ್.ಡಿ.‌ ದೇವೇಗೌಡರ ಆಪ್ತ ಡ್ಯಾನಿಷ್ ಅಲಿ ಈಗ ಉತ್ತರಪ್ರದೇಶದ ಅಮ್ರೋಹ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು ತಮ್ಮ ವಿರುದ್ದ ಅಭ್ಯರ್ಥಿ ಹಾಕದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

ಈಗಾಗಲೇ ಬಹುಜನ ಸಮಾಜ ಪಕ್ಷ ಪ್ರಕಟಿಸಿರುವ ಪಟ್ಟಿಯಲ್ಲಿ ಡ್ಯಾನಿಷ್ ಅಲಿ ಅವರಿಗೆ‌ ಅಮ್ರೋಹ ಕ್ಷೇತ್ರದ ಟಿಕೆಟ್ ಖಾತರಿಯಾಗಿದೆ. ಅವರೀಗ ಬಿಎಸ್​​ಪಿ ಮತ್ತು ಎಸ್​​ಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಜೊತೆಗೆ ಕಾಂಗ್ರೆಸ್ ಪಕ್ಷದ ಬೆಂಬಲವೂ ಸಿಕ್ಕಿಬಿಟ್ಟರೆ ಗೆಲುವು ಸುಲಭ ಎಂದು ಡ್ಯಾನೀಶ್ ಅಲಿ, ರಾಹುಲ್ ಗಾಂಧಿ ಅವರಿಗೆ ಮನವಿ‌ ಮಾಡಿದ್ದಾರೆ. 

ಈಗಾಗಲೇ ಜೆಡಿಎಸ್ ತೊರೆದಿದ್ದರೂ‌ ಕಾಂಗ್ರೆಸ್ ನೆರವನ್ನು ಪಡೆಯಲು ಜೆಡಿಎಸ್ ಪಕ್ಷದ ಹೆಸರೇಳುತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ತನ್ನ ಕ್ಷೇತ್ರವಾಗಿದ್ದ ಬೆಂಗಳೂರು ಉತ್ತರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಉತ್ತರ ಪ್ರದೇಶದಲ್ಲಿ ತಾವು ಕಣಕ್ಕಿಳಿಯುವ ಅಮ್ರೋಹ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೂಡಬಾರದೆಂದು ವಿನಂತಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಜೆಡಿಎಸ್​​ ಪಕ್ಷದ ಪರಿಚಯ ಇಲ್ಲ. ಹಾಗಾಗಿಯೇ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಡ್ಯಾನಿಷ್ ಅಲಿ ಅವರಿಗೆ ಪಕ್ಷದ ವರಿಷ್ಠ ದೇವೇಗೌಡರು, ಬಿಎಸ್​​ಪಿ ಪಕ್ಷದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದ್ದರು. ಮಾಜಿ ಪ್ರಧಾನಿ ದೇವೆಗೌಡರ ಒಪ್ಪಿಗೆಯ ಮೇರೆಗೆ ಡ್ಯಾನಿಷ್​​ ಅಲಿ ಬಿಎಸ್‍ಪಿ ಸೇರಿದ್ದರು.

ಇನ್ನು ಜೆಡಿಎಸ್ ತೊರೆದು ಬಿಎಸ್‍ಪಿ ಸೇರ್ಪಡೆಗೊಂಡ ಸಂದರ್ಭದಲ್ಲಿ ಡ್ಯಾನಿಷ್ ಅಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಲೋಕಸಭಾ ಚುನಾವಣೆಗೆ ಬಿಎಸ್‍ಪಿ ಹಾಗೂ ಜೆಡಿಎಸ್‍ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಹೀಗಾಗಿ ರಾಜಕೀಯ ಒಪ್ಪಂದದ ಪ್ರಕಾರ ಬಿಎಸ್‍ಪಿ ಸೇರಿದ್ದೇನೆ ಎಂದು ತಿಳಿಸಿದ್ದರು.

Trending News