ನವದೆಹಲಿ: ರಾಷ್ಟ್ರಪತಿ ಭವನದ ಸಿಬ್ಬಂದಿ ವಸತಿಗೃಹದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವ ಗುರುವಾರ ರಾತ್ರಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ದೆಹಲಿಯ ಗಾಂಧಿನಗರ ಪ್ರದೇಶದ ನಿವಾಸಿಯಾಗಿದ್ದ ತ್ರಿಲೋಕ್ ಚಂದ್ ಎಂದು ಗುರುತಿಸಲಾಗಿದ್ದು, ಕೆಲವು ದಿನಗಳಿಂದ ರಾಷ್ಟ್ರಪತಿ ಭವನದ ಸಿಬ್ಬಂದಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕೊಳೆತ ವಾಸನೆಯಿಂದ ಶವವನ್ನು ಪತ್ತೆ ಹಚ್ಚಿದ ಅಲ್ಲಿನ ನೆರೆಹೊರೆಯವರು ಸೌತ್ ಅವೆನ್ಯೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವ್ಯಕ್ತಿಯು ಮೂರು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಅಪ್ ಪೋಲಿಸ್ ಆಯುಕ್ತರು, ಮೃತ ವ್ಯಕ್ತಿಯು ವಾಸಿಸುತ್ತಿದ್ದ ಕೊಠಡಿಯಾ ಬಾಗಿಲನ್ನು ಒಳಗಿನಿಂದ ಹಾಕಲಾಗಿದ್ದು, ಅವರೊಬ್ಬರೇ ವಾಸವಿದ್ದರು. ಹಾಗಾಗಿ ಇದೊಂದು ಸಹಜ ಸಾವಾಗಿರಬಹುದು. ವಯಸ್ಸಾಗಿದ್ದರಿಂದ ಆತ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.