ದೆಹಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಪ್ರಸ್ತಾವಕ್ಕೆ ಕೇಜ್ರಿವಾಲ್ ಸಚಿವ ಸಂಪುಟ ಅನುಮೋದನೆ

ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮುಂಚೆಯೇ ದೆಹಲಿ ಕ್ಯಾಬಿನೆಟ್ 2019 ರ ಅಕ್ಟೋಬರ್ 29 ರಿಂದ ದೆಹಲಿಯ ಎಲ್ಲಾ ಸಾರಿಗೆ ನಿಗಮ ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

Updated: Aug 29, 2019 , 07:05 PM IST
ದೆಹಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಪ್ರಸ್ತಾವಕ್ಕೆ ಕೇಜ್ರಿವಾಲ್ ಸಚಿವ ಸಂಪುಟ ಅನುಮೋದನೆ
file photo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮುಂಚೆಯೇ ದೆಹಲಿ ಕ್ಯಾಬಿನೆಟ್ 2019 ರ ಅಕ್ಟೋಬರ್ 29 ರಿಂದ ದೆಹಲಿಯ ಎಲ್ಲಾ ಸಾರಿಗೆ ನಿಗಮ ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.

ಇದೇ ವೇಳೆ ದೆಹಲಿ ಕ್ಯಾಬಿನೆಟ್ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನ ಯೋಜನೆಗೆ ಅನುಮೋದನೆ ನೀಡಿತು. ಅಲ್ಲದೇ 100 ಪಿಎಚ್ಡಿ ಹಾಗೂ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಐದು ಲಕ್ಷ ರೂ.ಗಳನ್ನು ಸಂಪೂರ್ಣ ಅವಧಿಗೆ ಗರಿಷ್ಠ 20 ಲಕ್ಷ ರೂ.ಗಳವರೆಗೆ ನೀಡುವ ಪ್ರಸ್ತಾಪವನ್ನು ಕ್ಯಾಬಿನೆಟ್ ಅಂಗೀಕರಿಸಿತು. 

ಡಿಟಿಸಿ ಬಸ್ಸುಗಳು ಮತ್ತು ದೆಹಲಿ ಮೆಟ್ರೊಗಳಲ್ಲಿ ಮಹಿಳೆಯರಿಗೆ ಉಚಿತ ಸವಾರಿ ಯೋಜನೆಗಾಗಿ ದೆಹಲಿ ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಅವರು ಸೋಮವಾರದಂದು 290 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರು.ವಿಧಾನಸಭೆಯ ಮಾನ್ಸೂನ್ ಅಧಿವೇಶನದಲ್ಲಿ ಅನುದಾನವನ್ನು ಮಂಡಿಸುವಾಗ ಸಿಸೋಡಿಯಾ ಅವರು 290 ಕೋಟಿ ರೂ.ಗಳಲ್ಲಿ 140 ಕೋಟಿ ರೂ.ಗಳನ್ನು ಡಿಟಿಸಿ ಮತ್ತು ಅದರ ಕ್ಲಸ್ಟರ್ ಬಸ್‌ಗಳಿಗೆ ಹಂಚಿಕೆ ಮಾಡಲಾಗಿದ್ದು, 150 ಕೋಟಿ ರೂ.ಗಳನ್ನು ದೆಹಲಿ ಮೆಟ್ರೋಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದರು. ಆಗಸ್ಟ್ 15 ರಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಡಿಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅಕ್ಟೋಬರ್ 29 ರಿಂದ ಪ್ರಾರಂಭವಾಗುವುದಾಗಿ ಘೋಷಿಸಿದ್ದರು.

ಮಂಗಳವಾರದಂದು ಕೇಜ್ರಿವಾಲ್ ದೆಹಲಿಯವರಿಗೆ ನೀರಿನ ಬಿಲ್ ಮೇಲಿನ ಯಾವುದೇ ಬಾಕಿ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಈ ಕ್ರಮವನ್ನು ಸಮರ್ಥಿಸಿಕೊಂಡು ಕೇಜ್ರಿವಾಲ್ ಅವರು ದೆಹಲಿ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ನೀರು ಸರಬರಾಜಿಗೆ ಸಂಬಂಧಿಸಿದಂತೆ ಮುಖ್ಯವಾಹಿನಿಗೆ ತರುವ ಉದ್ದೇಶವನ್ನು ಹೊಂದಿದ್ದಾರೆ ಎಂದು ಹೇಳಿದರು.

"ದೆಹಲಿಯ ಜನರಿಗೆ ಮುಖ್ಯವಾಹಿನಿಗೆ ಸೇರಲು ಮತ್ತು ನೀರಿನ ಮೀಟರಗಳನ್ನು  ಸ್ಥಾಪಿಸಲು ಇದು ಮುಕ್ತ ಆಹ್ವಾನವಾಗಿದೆ. ನವೆಂಬರ್ 30 ರ ಮೊದಲು ಮೀಟರ್ ಅಳವಡಿಸಿದ ಗ್ರಾಹಕರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ ”ಎಂದು ಕೇಜ್ರಿವಾಲ್ ಹೇಳಿದ್ದಾರೆ.