ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ನಿನ್ನೆಯಿಂದ ಅವರು ಗಂಟಲು ನೋವು ಹಾಗೂ ಲಘು ಜ್ವರ ಕಾಣಿಸಿಕೊಂಡ ಕುರಿತು ದೂರಿದ್ದಾರೆ. ನಿನ್ನೆ ಮಧ್ಯಾಹ್ನದಿಂದ ಅವರು ತಮ್ಮ ಎಲ್ಲ ಸಭೆಗಳನ್ನು ರದ್ದುಗೊಳಿಸಿದ್ದಾರೆ. ಅಷ್ಟೇ ಅಲ್ಲ ಇತರರನ್ನು ಭೇಟಿಯಾಗಲು ಕೂಡ ಅವರು ನಿರಾಕರಿಸಿದ್ದಾರೆ. ನಿನ್ನೆಯಿಂದ ತನ್ನಷ್ಟಕ್ಕೆ ತಾನೇ ಅವರು ಮನೆಯಲ್ಲಿ ಐಸೋಲೆಶನ್ ಗೆ ಒಳಗಾಗಿದ್ದಾರೆ. ನಾಳೆ ಅವರ ಮೇಲೆ ಕೊರೊನಾ ಟೆಸ್ಟ್ ನಡೆಯಲಿದೆ. ಈ ನಡುವೆ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 28,936 ಕ್ಕೆ ತಲುಪಿದ್ದು, ಇಂದು ಒಟ್ಟು 1,282 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೊಂದೆಡೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈ ಮಾರಕ ಕಾಯಿಲೆಗೆ ಬಲಿಯಾದವರ ಸಂಖ್ಯೆ 812ಕ್ಕೆ ತಲುಪಿದೆ. ಇದಕ್ಕೂ ಮೊದಲು ಈ ಕುರಿತು ಭಾನುವಾರ ಘೋಷಣೆ ಮಾಡಿದ್ದ ಅರವಿಂದ್ ಕೆಜ್ರಿವಾಲ್, ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದೆಹಲಿ ನಿವಾಸಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, "ಮಾರ್ಚ್ ವೇಳೆಗೆ ದೆಹಲಿಯ ಎಲ್ಲಾ ಆಸ್ಪತ್ರೆಗಳು ದೇಶದ ಎಲ್ಲಾ ಜನರಿಗೆ ಮುಕ್ತವಾಗಿದ್ದವು. ದೆಹಲಿ ನಿವಾಸಿಗಳು ಯಾವುದೇ ವ್ಯಕ್ತಿಗೆ ಚಿಕಿತ್ಸೆಯನ್ನು ನಿರಾಕರಿಸಿಲ್ಲ ಮತ್ತು ದೆಹಲಿಯಲ್ಲಿ ಯಾವಾಗಲು ಶೇ.60 ರಿಂದ ಶೇ.70 ರಷ್ಟು ರೋಗಿಗಳು ಹೊರರಾಜ್ಯದಿಂದ ಬರುತ್ತಾರೆ. ಸದ್ಯ ಸುಮಾರು 7.5 ಲಕ್ಷ ಜನರು ಈ ಕುರಿತು ನಮಗೆ ಸಲಹೆಗಳನ್ನು ಕಳುಹಿಸಿದ್ದಾರೆ. ಅಂದರೆ ಶೇ.90 ಕ್ಕೂ ಅಧಿಕ ಜನರು ಕೊರೊನಾ ವೈರಸ್ ಮಹಾಮಾರಿಯ ಸಮಯದಲ್ಲಿ ದೆಹಲಿಯ ಆಸ್ಪತ್ರೆಗಳು ಕೇವಲ ರಾಷ್ಟ್ರೀಯ ರಾಜಧಾನಿಯ ಕೊರೊನಾ ರೋಗಿಗಳ ಉಪಚಾರಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂಬುದು ಅವರ ಅನಿಸಿಕೆಯಾಗಿದೆ" ಎಂದು ಹೇಳಿದ್ದರು.
ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕೇವಲ ದೆಹಲಿ ನಿವಾಸಿಗಳಿಗೆ ಮಾತ್ರ ಚಿಕಿತ್ಸೆ ನೀಡಲಿವೆ ಎಂದು ನಿರ್ಧರಿಸಲಾಗಿದೆ ಎಂದು ಅರವಿಂದ್ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ದೆಹಲಿ BJP ಮುಖ್ಯಸ್ಥ ಆದೇಶ್ ಗುಪ್ತಾ, ಯಾವುದೇ ಓರ್ವ ವ್ಯಕ್ತಿ ದೆಹಲಿಯವರೆ ಆಗಿರಲಿ ಅಥವಾ ದೆಹಲಿಯಿಂದ ಹೊರಗಿನವರೆ ಆಗಿರಲಿ, ನಗರದ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಏತನ್ಮಧ್ಯೆ, ದೇಶದಲ್ಲಿ 9,983 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾದ ನಂತರ, ದೇಶಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 2,56,611 ಕ್ಕೆ ತಲುಪಿದೆ. ಸೋಂಕಿನಿಂದಾಗಿ ಇನ್ನೂ 206 ಜನರು ಬಲಿಯಾಗಿದ್ದು, ಸೋಂಕಿನಿಂದ ಬಲಿಯಾದವರ ಒಟ್ಟು ಸಂಖ್ಯೆ 7,135 ಕ್ಕೆ ಏರಿಕೆಯಾಗಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿಯ ಪ್ರಕಾರ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಯುಎಸ್, ಬ್ರೆಜಿಲ್, ರಷ್ಯಾ ಮತ್ತು ಯುಕೆ ನಂತರ ಭಾರತವು ವಿಶ್ವದ ಐದನೇ ಹೆಚ್ಚು ಪೀಡಿತ ರಾಷ್ಟ್ರವಾಗಿದೆ.