)
Delhi Name Change: ಭಾರತದ ರಾಜಧಾನಿ ದೆಹಲಿ ಲಕ್ಷಾಂತರ ವರ್ಷಗಳ ಇತಿಹಾಸವನ್ನು ಹೊಂದಿರುವ ನಗರ. ಪುರಾತನ ಕಾಲದಿಂದ ಇಂದಿನವರೆಗೆ ಹಲವು ಸಾಮ್ರಾಜ್ಯಗಳು ಈ ನಗರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದವು. ಮೊಘಲರು, ದೆಹಲಿ ಸುಲ್ತಾನರು, ಪೃಥ್ವಿರಾಜ್ ಚೌಹಾಣ್ರಂತಹ ರಾಜಪೂತ ವೀರರು, ಹಾಗೂ ಬ್ರಿಟಿಷರು ಸಹ ದೆಹಲಿಯಿಂದಲೇ ತಮ್ಮ ಆಳ್ವಿಕೆಯನ್ನು ನಡೆಸಿದ್ದರು. ಈಗ ಈ ಐತಿಹಾಸಿಕ ನಗರಿಯ ಹೆಸರೇ ಬದಲಾಗುವ ಸಾಧ್ಯತೆ ಎದುರಾಗಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಅವರು ದೆಹಲಿಯ ಹೆಸರನ್ನು “ಇಂದ್ರಪ್ರಸ್ಥ” ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಅವರ ಪ್ರಕಾರ, “ಇಂದ್ರಪ್ರಸ್ಥ” ಎಂಬ ಹೆಸರು ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿರುವ ಪಾಂಡವರ ನಗರವನ್ನು ಪ್ರತಿನಿಧಿಸುತ್ತದೆ. ಮಹಾಭಾರತದ ಪ್ರಕಾರ, ಪಾಂಡವರು ಯಮುನಾ ನದಿಯ ತೀರದಲ್ಲಿ ಇಂದ್ರಪ್ರಸ್ಥ ಎಂಬ ನಗರವನ್ನು ನಿರ್ಮಿಸಿಕೊಂಡಿದ್ದರು, ಅದನ್ನು ವಿಶ್ವಕರ್ಮ ದೇವತೆ ನಿರ್ಮಿಸಿದ್ದಾರೆ ಎಂಬ ನಂಬಿಕೆ ಇದೆ.
ಖಂಡೇಲ್ವಾಲ್ ಅವರ ಅಭಿಪ್ರಾಯದಲ್ಲಿ, ದೆಹಲಿಯ ನಿಜವಾದ ಬೇರುಗಳು ಇಂದ್ರಪ್ರಸ್ಥದಲ್ಲಿವೆ. ಹೀಗಾಗಿ, ನಗರಕ್ಕೆ ಆ ಪುರಾತನ ಹೆಸರನ್ನೇ ಹಿಂತಿರುಗಿಸುವುದರಿಂದ ಭಾರತದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಗಳು ಮತ್ತಷ್ಟು ಗೌರವ ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ. ಈ ಕುರಿತಂತೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಅವರು ಹಳೆಯ ದೆಹಲಿ ರೈಲು ನಿಲ್ದಾಣ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೂ ಹೊಸ ಹೆಸರುಗಳನ್ನು ನೀಡಬೇಕೆಂದು ಸೂಚಿಸಿದ್ದಾರೆ. ಜೊತೆಗೆ, ದೆಹಲಿಯಲ್ಲಿ ಪಾಂಡವರ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಕೂಡ ಮುಂದಿಟ್ಟಿದ್ದಾರೆ.
ದೆಹಲಿಯ ಪುರಾಣ ಕಿಲಾ ಪ್ರದೇಶವನ್ನೇ ಇಂದ್ರಪ್ರಸ್ಥ ಎಂದು ಕೆಲವು ಹಿಂದುತ್ವ ಸಂಘಟನೆಗಳು ಗುರುತಿಸಿವೆ. ಅವರು ಹೇಳುವಂತೆ, “ದೆಹಲಿಯ ಇತಿಹಾಸದ ಬೇರುಗಳು ಪಾಂಡವರ ಕಾಲದ ಇಂದ್ರಪ್ರಸ್ಥದಲ್ಲಿವೆ. ಈ ಹೆಸರಿನ ಬದಲಾವಣೆ ಮೂಲಕ ದೇಶದ ಪಾರಂಪರಿಕ ಇತಿಹಾಸವನ್ನು ಸಂರಕ್ಷಿಸಲು ಸಾಧ್ಯ.” ಪ್ರಸ್ತುತ ದೆಹಲಿಯ ರಾಜ್ಯ ಸರ್ಕಾರಕ್ಕೂ, ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರಕ್ಕೂ ಬಿಜೆಪಿ ನೇತೃತ್ವ ನೀಡುತ್ತಿದೆ. ಹೀಗಾಗಿ, ಈ ಬೇಡಿಕೆಗೆ ಕೇಂದ್ರ ಸರ್ಕಾರ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ. ದೆಹಲಿಯ ಹೆಸರನ್ನು ನಿಜವಾಗಿಯೂ “ಇಂದ್ರಪ್ರಸ್ಥ” ಎಂದು ಬದಲಾಯಿಸಲಾಗುತ್ತದೆಯೇ ಎಂಬುದನ್ನು ಮುಂದಿನ ದಿನಗಳಲ್ಲಿ ತಳಿಯಲಿದೆ.