ದೆಹಲಿಯಲ್ಲಿ ಸಂಭವಿಸಿದ ಕಾರು ಸ್ಪೋಟ ಪ್ರಕರಣ ದೇಶದೆಲ್ಲೆಡೆ ಆತಂಕ ಸೃಷ್ಟಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂಡ ಹೈ ಅಲರ್ಟ್ ಘೋಷಣೆ ಮಾಡಿದ್ದು, ರಾತ್ರಿಯಿಡೀ ಖಾಕಿ ಪಡೆ ಹದ್ದಿನ ಕಣ್ಣಿಟ್ಟು ಎಲ್ಲೆಡೆ ನಿಗಾ ವಹಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದ ಸ್ಪೋಟ ದೇಶದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕಾರು ಸ್ಪೋಟದ ಬಳಿಕ ದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಎಲ್ಲೆಡೆ ತೀವ್ರ ನಿಗಾ ವಹಿಸಲಾಗಿದೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಕೂಡ ಹೈ ಅಲರ್ಟ್ ಘೋಷಣೆಯಾಗಿದ್ದು, ರಾತ್ರಿಯಿಡೀ ಪೊಲೀಸರು ಫೀಲ್ಡ್ ಗಿಳಿದು ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ರಾತ್ರಿಯಿಂದಲೇ ಅಲರ್ಟ್ ಆಗಿದ್ದ ನಗರ ಪೊಲೀಸರು ರಸ್ತೆಗಿಳಿದು ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿದರು. ಅನುಮಾನಸ್ಪದ ವಾಹನಗಳನ್ನ ಪತ್ತೆ ಹಚ್ಚಿ ವಾಹನಗಳ ವಿವರ ಸಂಗ್ರಹಿಸಿ ಕಳುಹಿಸಿದರು. ಖುದ್ದು ಡಿಸಿಪಿಗಳೇ ರಸ್ತೆಗೆ ಇಳಿದಿದ್ದು, ಕಾರು, ಬೈಕ್ ಸೇರಿದಂತೆ ಪ್ರತಿಯೊಂದು ವಾಹನದ ತಪಾಸಣೆ ನಡೆಸಿದರು. ಇನ್ನೂ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ಸ್ಟೇಷನ್, ಮಾಲ್ ಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಕಮೀಷನರ್ ಸೂಚಿಸಿದ್ದು, ರಾತ್ರಿಯಿಂದಲೇ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟೇಚ್ಚರ ವಹಿಸಲು ಆದೇಶಿಸಿದ ಕಮೀಷನರ್ ಎಲ್ಲೆಡೆ ತಪಾಸಣೆ ನಡೆಸಲು ಸೂಚಿಸಿದರು.
ದೆಹಲಿಯಲ್ಲಿ ಸಂಭವಿಸಿದ ಸ್ಪೋಟ ನಗರದಲ್ಲಿ ಖಾಕಿ ಪಡೆಯ ನಿದ್ದೆ ಕೆಡಿಸಿದೆ. ಪ್ರಮುಖ ಏರಿಯಾ, ಸ್ಥಳಗಳಲ್ಲಿ ನಿಗಾ ವಹಿಸಲಾಗಿದೆ. ಹಾಗೂ ನಗರಕ್ಕೆ ಎಂಟ್ರಿಯಾಗುವ ಪ್ರತಿ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಲಾಗ್ತಿದೆ. ಹೊಟೇಲ್, ಲಾಡ್ಜ್ ಗಳ ಮೇಲೂ ನಿಗಾ ಇಟ್ಟಿರುವ ಪೊಲೀಸರು ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನೂ ರಾಜ್ಯ ರೈಲ್ವೇ ಪೊಲೀಸರು ಸಹ ಫುಲ್ ಅಲರ್ಟ್ ಆಗಿದ್ದು, ಕರ್ನಾಟಕ ರೈಲ್ವೆ ವ್ಯಾಪ್ತಿ ಒಳಗೆ ಬರುವ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೇ ಎಸ್ಪಿ ಯತೀಶ್ ಸ್ಥಳೀಯ ಠಾಣೆಗಳ ಸಿಬ್ಬಂದಿ ಸಹಕಾರದೊಂದಿಗೆ ಭದ್ರತೆ ನೀಡಲಾಗಿದ್ದು,ಇದುವರೆಗೆ ಯಾವುದೇ ಅನುಮಾನಸ್ಪದ ಚಟುವಟಿಕೆ ಕಂಡುಬಂದಿಲ್ಲ. ಏನಾದ್ರೂ ಅನುಮಾನಸ್ಪದ ವ್ಯಕ್ತಿ ಹಾಗೂ ವಸ್ತುಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.









