)
West Bengal Road accident: ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಬುರ್ದ್ವಾನ್ನಿಂದ ದುರ್ಗಾಪುರಕ್ಕೆ ಹೋಗುತ್ತಿದ್ದ ಖಾಸಗಿ ಪ್ರಯಾಣಿಕ ಬಸ್ ನಿಲ್ಲಿಸಿದ್ದ ಟ್ರ್ಯಾಕ್ಟರ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಪೂರ್ವ ಬುರ್ದ್ವಾನ್ನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 19 ರಲ್ಲಿರುವ ನಲಾ ಫೆರ್ರಿ ಘಾಟ್ನಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಬಿಹಾರದವರಾಗಿದ್ದು, ಅವರು ಗಂಗಾ ನದಿಯಲ್ಲಿ ಸ್ನಾನ ಮಾಡಿ ಹಿಂತಿರುಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ 6 ಮಕ್ಕಳು ಸೇರಿದಂತೆ ಒಟ್ಟು 45 ಪ್ರಯಾಣಿಕರಿದ್ದರು.
ಈ ಅಪಘಾತದಲ್ಲಿ ಸಾವನ್ನಪ್ಪಿದ 10 ಜನರ ಪೈಕಿ 8 ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಬಸ್ಸಿನಲ್ಲಿದ್ದ ಎಲ್ಲಾ 6 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರ ಸಂಖ್ಯೆ 35 ಎಂದು ಹೇಳಲಾಗಿದೆ. ಎಲ್ಲಾ ಗಾಯಾಳುಗಳನ್ನು ಬರ್ಧಮಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.