)
Mumbai Cyber Scam: ಸೈಬರ್ ವಂಚಕರು ಸೋಷಿಯಲ್ ಮೀಡಿಯಾದಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಫೋಟೋ ಬಳಸಿಕೊಂಡು ಮುಂಬೈನ ನಿವೃತ್ತ ಅಧಿಕಾರಿ ಒಬ್ಬರಿಗೆ ಬರೋಬ್ಬರಿ 1.47 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಸದ್ಯ ಈ ಸಂಬಂಧ ಮುಂಬೈನ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಫೋಟೋದ ಜಾಹೀರಾತು ಅನ್ನು ಸೈಬರ್ ಕಿರಾತಕರು ಮೊದಲು ಫೇಸ್ಬುಕ್ನಲ್ಲಿ ಹರಿ ಬಿಟ್ಟಿದ್ದಾರೆ. ಇದನ್ನು ಮುಂಬೈನ ನಿವೃತ್ತ ಅಧಿಕಾರಿ ನೋಡಿದ್ದಾರೆ. ಜಾಹೀರಾತಿನಲ್ಲಿ ಕೇವಲ 21,000 ರೂಪಾಯಿ ಹೂಡಿಕೆ ಮಾಡಿದರೆ 60 ಸಾವಿರ ರೂಪಾಯಿಗಳನ್ನು ನೀಡುವುದಾಗಿ ತಿಳಿಸಲಾಗಿತ್ತು. ಇದಕ್ಕೆ ಆಕರ್ಷಿತನಾದ ವ್ಯಕ್ತಿ ಫೇಸ್ಬುಕ್ನಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ, ತನ್ನ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ವೈಯಕ್ತಿಕ ವಿವರ ಹಂಚಿಕೊಂಡ ಬೆನ್ನಲ್ಲೇ ಮೀನಾಕ್ಷಿ ಎನ್ನುವ ಮಹಿಳೆಯೊಬ್ಬರು ವಾಟ್ಸ್ಅಪ್ ಮೂಲಕ ಕಾಲ್ ಮಾಡಿ, ಯುಪಿಎಸ್ಟಿಒಎಕ್ಸ್ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾರೆ. ಬಳಿಕ ಹಣ ಹೂಡಿಕೆಯ ಕುರಿತು ವ್ಯಕ್ತಿಗೆ ಮಾರ್ಗದರ್ಶನ ನೀಡಿದ್ದಾರೆ. ಬಳಿಕ ನಕಲಿಯಾದಂತಹ ಎಸ್ಬಿಐ ವೆಲ್ತ್ ಮೈಂಡ್ಸೆಟ್, ಸೇವಾಕ್ಷ ಮತ್ತು ರುಬಿಕಾನ್ ರೀಸರ್ಚ್ ಲಿಮಿಟೆಡ್ ಸೇರಿದಂತೆ ನಕಲಿ ಐಪಿಒಗಳಲ್ಲಿ ಹೂಡಿಕೆ ಮಾಡಲು ವ್ಯಕ್ತಿಗೆ ಮನವೊಲಿಕೆ ಮಾಡಿದ್ದಾರೆ.
ಈ ಎಲ್ಲದನ್ನು ಒಪ್ಪಿಕೊಂಡ ವ್ಯಕ್ತಿ ಹಂತ ಹಂತವಾಗಿ ಬರೋಬ್ಬರಿ 1.47 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದ್ದಾರೆ. ಹಣ ಪಾವತಿ ಮಾಡುತ್ತಿದ್ದಂತೆ ಫೇಕ್ ಡ್ಯಾಶ್ ಬೋರ್ಡ್ನಲ್ಲಿ ಆರು ಕೋಟಿ ರೂಪಾಯಿ ಲಾಭ ಗಳಿಸಿದ್ದೀರಿ ಎಂದು ತೋರಿಸುತ್ತಿತ್ತು.ಈ ಲಾಭದ ಹಣ ಡ್ರಾ ಮಾಡಲು ಹೋದಾಗ ಇನ್ನು 90 ಲಕ್ಷ ರೂಪಾಯಿ ಪಾವತಿ ಮಾಡುವಂತೆ ಹೇಳಲಾಗಿದೆ. ಆಗ ವ್ಯಕ್ತಿಗೆ ಅನುಮಾನ ಬಂದು ಮೋಸ ಹೋಗಿರುವುದಾಗಿ ಗೊತ್ತಾಗಿ ಆಘಾತ ಅನುಭವಿಸಿದ್ದಾನೆ ಎನ್ನಲಾಗಿದೆ.
ಸದ್ಯ ಈ ಸಂಬಂಧ ಮುಂಬೈ ನಗರದ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸೈಬರ್ ವಂಚಕರು ನಿರ್ಮಲಾ ಸೀತಾರಾಮನ್ ಅವರ ಫೋಟೋ ಬಳಸಿ, ನಕಲಿ ಕಂಪನಿ ಹಾಗೂ ಫೇಕ್ ಕ್ಲೊನ್ ವೆಬ್ಸೈಟ್ಗಳನ್ನು ಬಳಕೆ ಮಾಡಿರುವುದು ಗೊತ್ತಾಗಿದೆ.ಇನ್ನು ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗುತ್ತಿದೆ.ಕೇಂದ್ರ ಹಣಕಾಸು ಸಚಿವೆ ಅವರು ಈ ಮೊದಲೇ ಡೀಫ್ಫೇಕ್ ವಿಡಿಯೋ ಹಾಗೂ ಎಐ ಫೋಟೋ ಬಳಸಿಕೊಂಡು ಆನ್ಲೈನ್ನಲ್ಲಿ ಹಣ ವಂಚನೆ ಮಾಡುತ್ತಾರೆ ಎಂದು ಎಚ್ಚರಿಸಿದ್ದರು. ಆದರೂ ಇಂತಹ ಸೈಬರ್ ವಂಚನೆಯ ಜಾಲಕ್ಕೆ ಜನರು ಬಲಿಪಶುಗಳು ಆಗುತ್ತಿರುವುದು ಆತಂಕವೇ ಸರಿ.