ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನಡುವಿನ ಮೊದಲ “ಅಧಿಕೃತ” ಸಭೆ ಶುಕ್ರವಾರ ನಡೆಯಲಿದೆ. ಸುಮಾರು ಮೂರು ವರ್ಷಗಳಲ್ಲಿ, ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ನಡೆಯುತ್ತಿರುವ ಮೊದಲ ಅಧಿಕೃತ ಸಭೆ ಇದಾಗಿದೆ. ಸಭೆಯಲ್ಲಿ ರಾವ್ ಮತ್ತು ಜಗನ್ ಇಬ್ಬರೂ ಗೋದಾವರಿ ನದಿ ನೀರು ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.


COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 2016 ರಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿ ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವ ಉಮಾ ಭಾರತಿ ಕರೆದಿದ್ದ ಸಭೆಯಲ್ಲಿ ಭೇಟಿಯಾಗಿದ್ದರು.


ಈ ಬಾರಿ ಕೆ.ಚಂದ್ರಶೇಖರ್ ರಾವ್ ಮತ್ತು ನೂತನ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಡುವೆ ಸಭೆ ನಡೆಯಲಿದೆ.


ಕೆ. ಚಂದ್ರಶೇಖರ್ ರಾವ್ ಅವರ ಆಹ್ವಾನದ ಮೇರೆಗೆ ಜಗನ್ ಮೋಹನ್ ರೆಡ್ಡಿ ಅವರು ಕಾಲೇಶ್ವರಂ ನೀರಾವರಿ ಯೋಜನೆಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಆದಾದ ಒಂದು ವಾರದ ಬಳಿಕ ಈ ಸಭೆ ನಡೆಯುತ್ತಿರುವುದು ಗಮನಾರ್ಹವಾಗಿದೆ.


ಉಭಯ ನಾಯಕರು ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವಿನ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಮೂಲವೊಂದನ್ನು ಉಲ್ಲೇಖಿಸಿ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಆಂಧ್ರ ಪ್ರದೇಶ ಸಿಎಂ ಮತ್ತು ತೆಲಂಗಾಣ ಮುಖ್ಯಮಂತ್ರಿ ನಡುವೆ ಶುಕ್ರವಾರ ಸಭೆಯ ನಡೆಯಲಿದೆ ಎಂಬ ಮಾಹಿತಿಯನ್ನು ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಎಲ್.ವಿ.ಸುಬ್ರಹ್ಮಣ್ಯಂ ಖಚಿತಪಡಿಸಿದ್ದಾರೆ.


ಕೆ.ಚಂದ್ರಶೇಖರ್ ರಾವ್ ಪ್ರಸ್ತುತ ತೆಲಂಗಾಣದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೇ, ಜಗನ್ ಮೋಹನ್ ರೆಡ್ಡಿ ಅವರು ಮೇ 30 ರಂದು ಆಂಧ್ರಪ್ರದೇಶದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.