)
Satya Pal Malik death: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ದೆಹಲಿಯ ಆರ್ಎಂಎಲ್ ಆಸ್ಪತ್ರೆಯಲ್ಲಿ ನಿಧನರಾದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 79 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸತ್ಯಪಾಲ್ ಮಲಿಕ್ ಒಬ್ಬ ಅನುಭವಿ ರಾಜಕಾರಣಿಯಾಗಿದ್ದು, ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅವರ ನಿಧನವು ರಾಜಕೀಯ ವಲಯಗಳಲ್ಲಿ ಶೋಕದ ಅಲೆಯನ್ನು ಉಂಟುಮಾಡಿದೆ. ಮಲಿಕ್ ಅವರ ಸಾವಿನ ಬಗ್ಗೆ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು
ಸತ್ಯಪಾಲ್ ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರ, ಗೋವಾ, ಬಿಹಾರ ಮತ್ತು ಮೇಘಾಲಯದ ಮಾಜಿ ರಾಜ್ಯಪಾಲರಾಗಿದ್ದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಸತ್ಯಪಾಲ್ ಮಲಿಕ್ ಅವರು ದೀರ್ಘಕಾಲದವರೆಗೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಅವರ ಸಾವಿನ ಸುದ್ದಿಯನ್ನು ಅವರ ಅಧಿಕೃತ ಟ್ವಿಟರ್ ಖಾತೆ ಮತ್ತು ವಿವಿಧ ಸುದ್ದಿ ಮೂಲಗಳು ದೃಢಪಡಿಸಿವೆ.
पूर्व गवर्नर चौधरी सत्यपाल सिंह मलिक जी नहीं रहें।#satyapalmalik
— Satyapal Malik (@SatyapalMalik6) August 5, 2025
ಇದಕ್ಕೂ ಮೊದಲು ಸಾವಿನ ವದಂತಿಗಳು ಹರಡಿತ್ತು
ಜುಲೈ 2025ರಲ್ಲಿ ಸತ್ಯಪಾಲ್ ಮಲಿಕ್ ಅವರ ಸಾವಿನ ವದಂತಿ ಹರಡಿತ್ತು. ಅವರ ಸಾವಿನ ಸುದ್ದಿಯನ್ನ ಆಪ್ತ ಕಾರ್ಯದರ್ಶಿ ನಿರಾಕರಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಆಪ್ತ ಕಾರ್ಯದರ್ಶಿ ಕನ್ವರ್ ಸಿಂಗ್ ರಾಣಾ ಅವರು ಮಾಜಿ ರಾಜ್ಯಪಾಲರ ಅಧಿಕೃತ ಟ್ವಿಟರ್ ಖಾತೆಯಲ್ಲಿ, ʼಮಾಜಿ ರಾಜ್ಯಪಾಲ ಚೌಧರಿ ಸತ್ಯಪಾಲ್ ಸಿಂಗ್ ಮಲಿಕ್ ಅವರು ಪ್ರಸ್ತುತ ಐಸಿಯುನಲ್ಲಿ ದಾಖಲಾಗಿದ್ದಾರೆ. ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವದಂತಿಗಳನ್ನು ತಪ್ಪಿಸಿ ಮತ್ತು ಯಾವುದೇ ಸುಳ್ಳು ಸುದ್ದಿಗಳನ್ನು ಹರಡಬೇಡಿʼ ಎಂದು ಮನವಿ ಮಾಡಿಕೊಂಡಿದ್ದರು. ಮಲಿಕ್ ಅವರು ತಮ್ಮ ನೇರ ಹೇಳಿಕೆಗಳಿಗೆ ಹೆಸರಾಗಿದ್ದರು. ಚೌಧರಿ ಚರಣ್ ಸಿಂಗ್ ಅವರ ಅಡಿಯಲ್ಲಿ ತಮ್ಮ ರಾಜಕೀಯ ವೃತ್ತಿಜೀವನ ಪ್ರಾರಂಭಿಸಿದ್ದರು. ಜನತಾದಳ, ಸಮಾಜವಾದಿ ಪಕ್ಷ ಮತ್ತು ಬಿಜೆಪಿಯಂತಹ ವಿವಿಧ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದರು.
ಕಿರು ಜಲವಿದ್ಯುತ್ ಯೋಜನೆಯ ಲಂಚ ಪ್ರಕರಣ
ಕೇಂದ್ರ ತನಿಖಾ ದಳವು (CBI) ಮೇ ತಿಂಗಳಲ್ಲಿ ಕಿರು ಜಲವಿದ್ಯುತ್ ಯೋಜನೆಯ ಲಂಚ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತು ಇತರ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. 2022ರಲ್ಲಿ ಎಫ್ಐಆರ್ ದಾಖಲಾದ ನಂತರ, 2019ರಲ್ಲಿ ಕಿರು ಜಲವಿದ್ಯುತ್ ಸ್ಥಾವರ (HEP) ಯೋಜನೆಯ ಸಿವಿಲ್ ಕಾಮಗಾರಿಗಳಿಗಾಗಿ ಸುಮಾರು 2,200 ಕೋಟಿ ರೂ. ಮೌಲ್ಯದ ಒಪ್ಪಂದವನ್ನು ಖಾಸಗಿ ಕಂಪನಿಗೆ ನೀಡುವಲ್ಲಿನ ಅಕ್ರಮಕ್ಕೆ ಈ ಪ್ರಕರಣ ಸಂಬಂಧಿಸಿದೆ ಎಂದು ಸಿಬಿಐ ಹೇಳಿತ್ತು.