ಶಿಬು ಸೊರೆನ್ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜೂನ್ ಕೊನೆಯ ವಾರದಲ್ಲಿ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ನಿಧನರಾಗಿದ್ದಾರೆ. ಅವರು ತಮ್ಮ 81ನೆ ವಯಸ್ಸಿನಲ್ಲಿ ಕೊನೆ ಉಸಿರೆಳೆದಿದ್ದಾರೆ. ಶಿಬು ಸೊರೆನ್ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಮಗ ಮತ್ತು ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ತಂದೆಯ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ.
81 ವರ್ಷದ ಶಿಬು ಸೊರೆನ್, ಪ್ರಮುಖ ಬುಡಕಟ್ಟು ನಾಯಕರಾಗಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕರಾಗಿದ್ದರು. ಅವರು ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜೂನ್ ಕೊನೆಯ ವಾರದಲ್ಲಿ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದಾದ ನಂತರ, ಅವರನ್ನು ಪಾರ್ಶ್ವವಾಯು ಬಾಧಿಸಿತ್ತು. ಇದರಿಂದಾಗಿ ಶಿಬು ಸೊರೆನ್ ಆರೋಗ್ಯ ಇನ್ನಷ್ಟು ಹದಗೆಡಿಸಿತು. ಆಸ್ಪತ್ರೆ ಆಡಳಿತ ಮಂಡಳಿಯ ಪ್ರಕಾರ, ಅವರು ಇಂದು ಅಂದರೆ ಸೋಮವಾರ ಬೆಳಿಗ್ಗೆ 8:56 ಕ್ಕೆ ಮೃತಪಟ್ಟಿದ್ದಾರೆ. ಶುಬು ಸೊರೆನ್ ಸಾವನ್ನು ಅವರ ಪುತ್ರ ಹೇಮಂತ್ ಸೊರೆನ್ ದೃಢಪಡಿಸಿದ್ದಾರೆ. ಈ ಬಗ್ಗೆ ಅವರು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
आदरणीय दिशोम गुरुजी हम सभी को छोड़कर चले गए हैं।
आज मैं शून्य हो गया हूँ...
— Hemant Soren (@HemantSorenJMM) August 4, 2025
ಬುಡಕಟ್ಟು ಸಮುದಾಯದ ಧ್ವನಿ ಮತ್ತು ಜಾರ್ಖಂಡ್ ಚಳವಳಿಯ ನಾಯಕ:
ಶಿಬು ಸೊರೇನ್ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಜೆಎಂಎಂನ ಹಿಡಿತವನ್ನು ಹೊಂದಿದ್ದು, ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿದರು. 1987 ರಲ್ಲಿ ಪಕ್ಷದ ಆಡಳಿತ ವಹಿಸಿಕೊಂಡ ನಂತರ, ಅವರು ಅದನ್ನು ಬಲವಾದ ಜನಾಂದೋಲನವಾಗಿ ಪರಿವರ್ತಿಸಿದರು. ಅವರ ನಾಯಕತ್ವದ ಸಾಮರ್ಥ್ಯ ಮತ್ತು ಹೋರಾಟದ ಇಮೇಜ್ ಅವರಿಗೆ ರಾಷ್ಟ್ರೀಯ ರಾಜಕೀಯದಲ್ಲಿ ಮನ್ನಣೆಯನ್ನು ತಂದುಕೊಟ್ಟಿತು. ಅವರು ಮೂರು ಬಾರಿ ಜಾರ್ಖಂಡ್ ಮುಖ್ಯಮಂತ್ರಿಯಾದರು ಮತ್ತು ಕೇಂದ್ರ ಸರ್ಕಾರದಲ್ಲಿ ಕಲ್ಲಿದ್ದಲು ಸಚಿವರಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ಅವರ ಜೀವನದ ದೊಡ್ಡ ಕನಸು ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಯಾಗಿದ್ದು, ದೀರ್ಘ ಹೋರಾಟದ ನಂತರ ಅದು ನನಸಾಯಿತು.
ಸದಾ ಸ್ಫೂರ್ತಿಯ ಚಿಲುಮೆ :
ಶಿಬು ಸೊರೆನ್ ನಿಧನದೊಂದಿಗೆ, ಜಾರ್ಖಂಡ್ ಒಂದು ಯುಗ, ಚಳುವಳಿ ಮತ್ತು ಸಿದ್ಧಾಂತದ ಸಂಕೇತವನ್ನು ಕಳೆದುಕೊಂಡಿದೆ. ಶಿಬು ಸೊರೆನ್ ಅವರ ಹೋರಾಟ, ಆಲೋಚನೆಗಳು ಮತ್ತು ಕೊಡುಗೆ ಮುಂಬರುವ ಪೀಳಿಗೆಗೆ ಯಾವಾಗಲೂ ಸ್ಫೂರ್ತಿಯ ನೆಲೆಯಾಗಿರುತ್ತದೆ ಎನ್ನುವುದು ಅವರ ಬೆಂಬಲಿಗರ ಮಾತು.